*ನಟಿ ರಮ್ಯಾ ಬೆನ್ನಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮೀಗೂ ಅಸಭ್ಯ ಕಮೆಂಟ್ ಕಾಟ*

ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ ಮಹಿಳಾ ಆಯೋಗ
ಪ್ರಗತಿವಾಹಿನಿ ಸುದ್ದಿ: ನಟಿ, ಮಾಜಿ ಸಂಸದೆ ರಮ್ಯಾ ಬಳಿಕ ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರಿಗೂ ಅಸಭ್ಯ ಸಂದೇಶಗಳ ಕಾಟ ಶುರುವಾಗಿದೆ. ಈ ಬಗ್ಗೆ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ, ರಮ್ಯಾ ಅವರ ರೀತಿಯಲ್ಲಿಯೇ ವಿಜಯಲಕ್ಷ್ಮೀ ದರ್ಶನ್ ಅವರಿಗೇ ಕೆಟ್ಟದಾಗಿ ಹಾಗೂ ಅಸಭ್ಯ ಪದಗಳಲ್ಲಿ ಕಮೆಂಡ್ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಸಂದೇಶ ರವಾನಿಸಲಾಗಿದ್ದು, ಈ ಬಗ್ಗೆ ದೂರು ಬಂದಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಯಾವುದೇ ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ಪದ ಬಳಕೆ ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಗವಹೇಳನ ಮಾಡಿದರೆ, ಹೆಣ್ಣುಮಕ್ಕಳ ಘನತೆಗೆ ಧಕ್ಕೆ ಬರುವಂತಹ ಪದ ಬಳಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ರಮ್ಯಾ ಅವರಿಗೆ ಅಸಭ್ಯ ಕಮೆಂಟ್ ಮಾಡಿದ್ದ 8 ಜನರು ಜೈಲು ಸೇರಿದ್ದಾರೆ. ಈ ಬಗ್ಗೆ ಎಚ್ಚರಿಕೆ ಇರಲಿ. ಸಾಮಾಜಿಕ ಜಾಲತಾಣಗಳನ್ನು ಹೆಣ್ಣುಮಕ್ಕಳ ಚಾರಿತ್ರ್ಯ ವಧೆಗೆ, ಗೌರವಕ್ಕೆ ಧಕ್ಕೆ ತರಲು ಬಳಸಬೇಡಿ. ಈ ಹಿಂದೆಯೂ ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ. ಯಾವುದೇ ಕೆಟ್ಟ ಕಮಂಟ್, ಸಂಡೆಶ ಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.