
ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಅಧಿಕೃತ ಕೆಲಸಗಳಿಗೆ ಹೆಲಿಕಾಪ್ಟರ್ ಮತ್ತು ವಿಮಾನಗಳ ಬಳಕೆ ಕುರಿತು ಕಟ್ಟುನಿಟ್ಟಿನ ಮಾನದಂಡ ರೂಪಿಸಿ ಟೆಂಡರ್ ಮೂಲಕವೇ ಹೆಲಿಕಾಪ್ಟರ್ ಹಾಗೂ ವಿಮಾನಗಳ ಸೇವೆ ಪಡೆಯಲು ನಿರ್ದಿಷ್ಟ ಮಾನದಂಡ ರೂಪಿಸುವ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜತೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸೋಮವಾರ ಸಭೆ ನಡೆಸಿದರು.
ಹೆಲಿಕಾಪ್ಟರ್‌ಗಳು ಮತ್ತು ವಿಶೇಷ ಜೆಟ್‌ಗಳನ್ನು ಈಗ ಗಂಟೆಯ ಆಧಾರದ ಮೇಲೆ ಬಾಡಿಗೆಗೆ ಪಡೆಯಲಾಗುತ್ತಿದ್ದು, ಸಭೆಯಲ್ಲಿ, ಗಂಟೆಯ ಆಧಾರದ ಬದಲಿಗೆ ಗುತ್ತಿಗೆ ಆಧಾರದ ಮೇಲೆ ಹೆಲಿಕಾಪ್ಟರ್ ಬಾಡಿಗೆಗೆ ಪಡೆಯಲು ಟೆಂಡರ್‌ಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಸಚಿವರ ರಾಜ್ಯ ಪ್ರವಾಸಕ್ಕಾಗಿ ಸರ್ಕಾರವು ಗಂಟೆಗೆ 1 ಲಕ್ಷ ರೂ. ವೆಚ್ಚದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳನ್ನು ಬಾಡಿಗೆಗೆ ಪಡೆಯುತ್ತಿದೆ. ದೆಹಲಿ ಭೇಟಿಗಳಿಗಾಗಿ ಹೆಚ್ಚಾಗಿ ವಾಣಿಜ್ಯ ವಿಮಾನಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಸಚಿವರ ಪ್ರಯಾಣವನ್ನು ಆರಾಮದಾಯಕವಾಗಿರಲು ಸರ್ಕಾರ ಮುಂದಾಗಿದೆ.
ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಡಿಕೆ.ಶಿವಕುಮಾರ್ ಅವರು, ಈ ಸಂಬಂಧ ಹಲವಾರು ವರ್ಷಗಳಿಂದ ಸರ್ಕಾರದ ಮುಂದೆ ಪ್ರಸ್ತಾವನೆ ಬಾಕಿ ಇದೆ. ಇದಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರೂ ಸೂಚನೆ ನೀಡಿದ್ದಾರೆ. ಹೀಗಾಗಿ ಇತರ ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
ಆರು ವರ್ಷಗಳ ಹಿಂದೆ ಗುಜರಾತ್ ಸರ್ಕಾರವು ಸುಮಾರು 190 ಕೋಟಿ ರೂ.ಗೆ ಬಾಂಬಾರ್ಡಿಯರ್ ಚಾಲೆಂಜರ್ 650 ವಿಮಾನವನ್ನು ಖರೀದಿಸಿದಂತೆ, ಕರ್ನಾಟಕವು ಸುಮಾರು 80 ಕೋಟಿ ರೂ.ಗೆ ಸ್ವಂತ ಹೆಲಿಕಾಪ್ಟರ್ ಅಥವಾ ಸುಮಾರು 150 ಕೋಟಿ ರೂ.ಗೆ ಜೆಟ್ ಖರೀದಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಉತ್ತರಪ್ರದೇಶ ಸರ್ಕಾರವು ಸೂಪರ್ ಕಿಂಗ್ ಏರ್ ಬಿ 250 ವಿಮಾನ ಮತ್ತು ಕೆಲವು ಹೆಲಿಕಾಪ್ಟರ್‌ಗಳನ್ನು ಹೊಂದಿದೆ, ಹರಿಯಾಣ ಇತ್ತೀಚೆಗೆ 80 ಕೋಟಿ ರೂ.ಗೆ ವಿಮಾನವನ್ನು ಖರೀದಿಸಿದೆ ಎಂದು ತಿಳಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ “ಸೋಮವಾರದ ಸಭೆಯಲ್ಲಿ ಕೆಟಿಪಿಪಿ ಕಾಯ್ದೆಯಡಿ ಹೆಲಿಕಾಪ್ಟರ್ ಅನ್ನು ನೇಮಿಸಿಕೊಳ್ಳುವ ಬಗ್ಗೆ ಮಾತ್ರ ಚರ್ಚಿಸಲಾಗಿದೆಯೇ ಹೊರತು ವಿಮಾನವನ್ನು ಖರೀದಿಸುವ ಬಗ್ಗೆ ಚರ್ಚಿಸಿಲ್ಲ ಎಂದು ತಿಳಿಸಿದ್ದಾರೆ.