*ದಯವಿಟ್ಟು ನನಗೆ ಸ್ವಲ್ಪ ವಿಷ ಕೊಡಿ: ಕೋರ್ಟ್ ಗೆ ಮನವಿ ಮಾಡಿದ ನಟ ದರ್ಶನ್*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಎರಡನೇ ಬಾರಿ ಜೈಲು ಸೇರಿರುವ ನಟ ದರ್ಶನ್ ಗೆ ಈಬಾರಿ ಜೈಲಿನಲ್ಲಿ ಯಾವುದೇ ರಾಜಾತಿಥ್ಯವಿಲ್ಲ. ಜೈಲಿನ ಕಟ್ಟುನಿಟ್ಟಾದ ನಿಯಮಗಳಿಂದ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನರಕ ದರ್ಶನವಾಗುತ್ತಿದೆ.
ನಟ ದರ್ಶನ್ ಹೆಚ್ಚುವರಿ ದಿಂಬು, ಬೆಡ್ ಶೀಟ್, ಹಾಸಿಗೆಗಾಗಿ ಕೋರಿದ್ದ ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆದಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಯನ್ನು ಹಾಜರುಪಡಿಸಲಾಗಿದೆ. ಈ ವೇಳೆ ನ್ಯಾಯಾಧಿಶರು ಅರ್ಜಿ ವಿಚಾರಣೆ ಮುಂದೂಡಿದ್ದಾರೆ. ವಿಚಾರಣೆ ಮುಂದೂಡುತ್ತಿದ್ದಂತೆ ಕೈ ಎತ್ತಿದ ದರ್ಶನ್, ‘ನನ್ನದೊಂದು ಮನವಿಯಿದೆ ಸ್ವಾಮಿ ಎಂದಿದ್ದಾರೆ. ದಯವಿಟ್ಟು ನನಗೆ ಸ್ವಲ್ಪ ವಿಷ ಕೊಟ್ಟುಬಿಡಿ’ ಎಂದು ಕೇಳಿದ್ದಾರೆ.
‘ನನಗೊಬ್ಬನಿಗೆ ಸ್ವಲ್ಪ ವಿಷ ಕೊಟ್ಟು ಬಿಡಿ ಸಾಕು. ನಾನು ಬಿಸಿಲು ನೋಡದೇ 30 ದಿನಗಳು ಆಗಿವೆ. ಕೈಯೆಲ್ಲಾ ಫಂಗಸ್ ಬಂದಿದೆ’ ಎಂದು ಕಣ್ಣೀರಿಟ್ಟಿದ್ದಾರೆ. ಈ ವೇಳೆ ಜಡ್ಜ್ ನೀವು ಹೀಗೆಲ್ಲ ಕೇಳುವಂತಿಲ್ಲ. ನಿಮಗೆ ಏನು ಬೇಕು ಎಂದು ಮನವಿಯಷ್ಟೇ ಮಾಡಬಹುದು. ಅದರ ಬಗ್ಗೆ ನ್ಯಾಯಾಧೀಶರು ವಿಚಾರಣೆ ನಡೆಸಿ ಜೈಲಾಧಿಕಾರಿಗಳಿಗೆ ಸೂಚಿಸುತ್ತಾರೆ. ನಿಮ್ಮ ಮನವಿ ಬಗ್ಗೆ ಮಧ್ಯಾಹ್ನ ವಿಚಾರಣೆ ನಡೆಸಲಾಗುವುದು ಎಂದು 3 ಗಂಟೆಗೆ ಆದೇಶ ಕಾಯ್ದಿರಿಸಿದರು.