
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ “ಸಾಂಸ್ಕೃತಿಕ ನಾಯಕ”ನೆಂದು ಘೋಷಿಸಿದ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇದೆ ಗುರುವಾರ ದಿನಾಂಕ 11 ರಂದು ಬೃಹತ್ ಪ್ರಮಾಣದಲ್ಲಿ ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಬಸವಣ್ಣನವರ ತತ್ವ ಸಿದ್ಧಾಂತ ಪ್ರಚಾರ ಮತ್ತು ಪ್ರಸಾರ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಇದೇ ತಿಂಗಳ ಒಂದರಂದು ಈ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು ಅದರ ಅಂಗವಾಗಿ ಬೆಳಗಾವಿಯಲ್ಲಿ ದಿನಾಂಕ 11ರಂದು ಆಯೋಜಿಸಲಾಗಿದೆ ಎಂದು ಹೇಳಿದರು.
ಲಿಂಗಾಯಿತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ, ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಈ ಅಭಿಯಾನ ನಡೆಸಲಾಗುತ್ತಿದೆ.
ಅಂದು ಮುಂಜಾನೆ 10:30 ಗಂಟೆಗೆ ಶಿವಬಸವ ನಗರದಲ್ಲಿರುವ ಡಾ.ಶಿವಬಸವ ಮಹಾಸ್ವಾಮಿಗಳವರ ವೃತ್ತದಲ್ಲಿ “ಬಸವ ರಥ”ಮತ್ತು ಅದರೊಂದಿಗೆ ಆಗಮಿಸುವ ಸುಮಾರು 15 ಜನ ಮಠಾಧೀಶರು ಮತ್ತು ತಂಡದವರನ್ನು ಸ್ವಾಗತಿಸುವ ಸಮಾರಂಭ ನಡೆಯಲಿದೆ. ನಂತರ ಆರ್.ಎನ್.ಶೆಟ್ಟಿ ಮಹಾವಿದ್ಯಾಲಯದ ಬಯಲು ಸಭಾಗ್ರಹದಲ್ಲಿ 11 ಗಂಟೆಗೆ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ಭಾಲ್ಕಿಯ ಪೂಜ್ಯ ಬಸವಲಿಂಗಪಟ್ಟದ್ದೇವರು, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರು ಮುಂತಾದವರು ವಿದ್ಯಾರ್ಥಿಗಳೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.
ಸಂಜೆ 4 ಗಂಟೆಗೆ ಲಿಂಗರಾಜ ಕಾಲೇಜಿನ ಆವರಣದಿಂದ ಆರಂಭವಾಗಿ ಶಿವಬಸವ ನಗರದಲ್ಲಿರುವ ಎಸ್‌ಜಿಬಿಐಟಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಮುಕ್ತಾಯಗೊಳ್ಳಲಿರುವ “ಬಸವ ಸಂಸ್ಕೃತಿ ಅಭಿಯಾನದ ಸಾಮರಸ್ಯದ ನಡಿಗೆ” (ಮೆರವಣಿಗೆ) ಗೆ ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ಚಾಲನೆ ನೀಡಲಿದ್ದಾರೆ.
ಈ ಸಾಮರಸ್ಯದ ನಡಿಗೆಯಲ್ಲಿ ವಚನ ಕಟ್ಟುಗಳನ್ನು ಹೊತ್ತು 3000 ಶರಣೆಯರು,770 ಅಮರಗಣಂಗಳ ಸ್ಮರಣಾರ್ಥವಾಗಿ 770 ಷಟಸ್ಥಲ ಧ್ವಜಧಾರಿ ಮತ್ತು ಬಸವಶ್ರೀರಕ್ಷೆ ಧಾರಿ ಶರಣರು, ಸುಮಾರು ಒಂದು ನೂರಕ್ಕೂ ಅಧಿಕ ವಿರಕ್ತ ಮಠದ ಮಠಾಧೀಶರು, ಹತ್ತು ಜನಪದ ಕಲಾ ಮೇಳಗಳು, ಶರಣರ ವೇಷಧಾರಿ ಮಕ್ಕಳು, ಎಂಟರಿಂದ ಹತ್ತು ಸಾವಿರ ಬಸವಭಕ್ತರು ಪಾಲ್ಗೊಳ್ಳುವ ವಿಶೇಷ ಸಾಮರಸ್ಯದ ನಡಿಗೆ ಇದಾಗಲಿದೆ ಎಂದವರು ವಿವರಿಸಿದರು.
ಸಂಜೆ 6:00ಗೆ ಶಿವಬಸವ ನಗರದಲ್ಲಿನ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿ ಜರುಗಲಿರುವ ಸಾರ್ವಜನಿಕ ಸಮಾವೇಶವನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ. ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಲಿದ್ದಾರೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿಯ ಪೂಜ್ಯ ಬಸವಲಿಂಗಪಟ್ಟದ್ದೇವರು,
ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ, ನಿಡಸೋಶಿ ಸಿದ್ದ ಸಂಸ್ಥಾನ ಮಠದ ಜಗದ್ಗುರು ಡಾ.ಪಂಚಮ ಶಿವಲಿಂಗೇಶ್ವರ ಮಹಾ ಸ್ವಾಮೀಜಿ, ಬಸವ ಧರ್ಮ ಪೀಠದ ಜಗದ್ಗುರು ಡಾ, ಗಂಗಾ ಮಾತಾಜಿ, ಸಾಣೇಹಳ್ಳಿ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯರು, ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು,ಭಾಗವಹಿಸಲಿದ್ದು ವಿಶೇಷ ಉಪನ್ಯಾಸಕರಾಗಿ ಕಲ್ಬುರ್ಗಿ ಜಿಲ್ಲೆ ಚಿಗರ ಹಳ್ಳಿಯ ಸಿದ್ಧಬಸವ ಕಬೀರ ಸ್ವಾಮಿ ಮತ್ತು ಬೀದರ್ ಜಿಲ್ಲೆಯ ಸಂತಪುರದ ಶಿವಲಿಂಗ ಹೇಡೆ ಅವರು ಆಗಮಿಸಲಿದ್ದಾರೆ.
ಬೆಳಗಾವಿ ಶಾಸಕ ಅಸೀಫ್ (ರಾಜು) ಸೇಠ, ಬೆಳಗಾವಿ ಜಿಲ್ಲೆ ಎಲ್ಲ ವಿರಕ್ತ ಮಠಗಳ ಮಠಾಧೀಶರು, ಬಸವರಾಜ್ ರೊಟ್ಟಿ, ಡಾ ಎಸ್ ಎಮ್ ದೊಡ್ಮನಿ, ಅಶೋಕ್ ಬೆಂಡಿಗೇರಿ, ಅಶೋಕ್ ಮಳಗಲಿ, ಬಸನಗೌಡ ಪಾಟೀಲ್, ರಮೇಶ್ ಕಳಸಣ್ಣವರ್, ವೀರಣ್ಣ ದೇಯಣ್ಣವರ್, ಎಸ್ ಜಿ ಸಿದ್ಧನಾಳ, ಶೈಲಜಾ ಭಿಂಗೆ, ಪ್ರೇಮಕ್ಕ ಅಂಗಡಿ, ಚಂದ್ರಶೇಖರ್ ಗುಡಿಸಿ, ಮಧುಮತಿ ಹಿರೇಮಠ, ಸಂಜಯ ಭಾವಿ, ಅವ್ವಕ್ಕ ಜೊಲ್ಲೆ, ಭಾಗವಹಿಸಲಿದ್ದಾರೆ.
ಬಸವಣ್ಣನವರನ್ನು ಸಂಸ್ಕೃತಿಕ ನಾಯಕನೆಂದು ಘೋಷಿಸುವುದು ರೊಂದಿಗೆ ಅದಕ್ಕೆ ಪೂರಕವಾದ ವಚನ ಸಾಹಿತ್ಯದ ಪ್ರಚಾರ ಮತ್ತು ಬಸವ ತತ್ವದ ಪ್ರಚಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದವರು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.
ಗಣತಿ ಕಾರ್ಯ ಸಂದರ್ಭದಲ್ಲಿ ಲಿಂಗಾಯತ ಎಂದು ಬೆರೆಸಬೇಕು ಎಂದು ಅವರು ಸಮಾಜದ ಬಾಂಧವರಿಗೆ ವಿನಂತಿಸಿದರು.
ಸಂಜೆ ಎಂಟು ಗಂಟೆಗೆ ಸಾಣೆಹಳ್ಳಿ ಶಿವ ಸಂಚಾರ ಕಲಾ ತಂಡದಿಂದ “ಜಂಗಮದೆಡೆಗೆ” ನಾಟಕ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವ ಸರ್ವರಿಗೂ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಬಸವರಾಜ್ ರೊಟ್ಟಿಯವರು ವಿವರಿಸಿದರು.ಜಾಗತಿಕ ಲಿಂಗಾಯಿತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಕ್ಕಾ ಅಂಗಡಿ,
ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ,ಇತರ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಎಸ್.ಜಿ.ಸಿದ್ನಾಳ, ರಾಜೇಶ್ವರಿ ದೇಯಣ್ಣವರ,ಮೋಹನ್ ಗುಂಡ್ಲೂರ, ಪ್ರವೀಣಕುಮಾರ ಚಿಕಲಿ ಅವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.