
ಪ್ರಗತಿವಾಹಿನಿ ಸುದ್ದಿ: ಮದ್ದೂರು ಘಟನೆಯ ಬಳಿಕ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಈ ಕೃತ್ಯ ಪೂರ್ವನಿಯೋಜಿತ ಎಂದು ಸ್ವತಃ ಗೃಹ ಸಚಿವ ಪರಮೇಶ್ವರ ಅವರೇ ಹೇಳಿದ್ದರು. ಇದೀಗ ಘಟನೆ ಸಂಬಂಧಿಸಿದಂತೆ ಮಂಡ್ಯ ಹೆಚ್ಚುವರಿ ಎಸ್ಪಿಯನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಮಂಡ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಿದೆ. ಯಾವುದೇ ಸ್ಥಳ ನಿಯೋಜನೆ ಮಾಡಿಲ್ಲ. ತಿಮ್ಮಯ್ಯ ಅವರ ಜಾಗಕ್ಕೆ ನವೀನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಆಂತರಿಕ ಭದ್ರತಾ ಲೋಪವನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಕಳೆದ ಭಾನುವಾರ (ಸೆಪ್ಟೆಂಬರ್ 7) ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಇದು ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಈ ವೇಳೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 22 ಜನರನ್ನು ಬಂಧಿಸಿದ್ದು, ಇನ್ನು ಇತರ ಏಳು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮದ್ದೂರು ಪಟ್ಟಣದಲ್ಲಿ ಬುಧವಾರ ಮತ್ತು ಗುರುವಾರ ಬೃಹತ್ ಪ್ರತಿಭಟನೆ ನಡೆಸಿತು. ಇದೀಗ ಈ ಬೆಳವಣಿಗೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್ಪಿಯನ್ನು ವರ್ಗಾವಣೆ ಮಾಡಲಾಗಿದೆ.