Kannada NewsKarnataka NewsPolitics

*ಶಿಕ್ಷಣದಿಂದ ಮಾತ್ರ ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು ಸಾಧ್ಯ: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಶಿಕ್ಷಣದಿಂದ ಮಾತ್ರ  ನಮ್ಮ ಜ್ಞಾನದ ವಿಕಾಸವಾಗುತ್ತದೆ. ಅದರಿಂದ  ನಾವು  ಸ್ವತಂತ್ರ, ಸ್ವಾಭಿಮಾನಿ ಹಾಗೂ ಜವಾಬ್ದಾರಿಯುತ ವ್ಯಕ್ತಿಯಾಗಲು  ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು. 

ಅವರು  ಇಂದು JSS ಪ್ರಸಾದ ನಿಲಯಗಳ ಹಿರಿಯ ವಿದ್ಯಾರ್ಥಿಗಳ ಗೃಹ ನಿರ್ಮಾಣ ಸಹಕಾರ ಸಂಘ  ನಿಯಮಿತ ಮೈಸೂರು ಇವರ ವತಿಯಿಂದ  ಮೈಸೂರಿನ ವರುಣ ಕೆರೆಯ ಪಕ್ಕದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ನಗರದಲ್ಲಿ  ಆಯೋಜಿಸಲಾಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಅನುಭವ ಮಂಟಪ ಹಾಗೂ ಸಂಘದ ಕಚೇರಿ ಯನ್ನು ಉದ್ಘಾಟನೆ ಮಾಡಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಜೆಎಸ್ಎಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಸೇರಿ ಗೃಹ ನಿರ್ಮಾಣ ಸಂಘವನ್ನು ಸ್ಥಾಪಿಸಿದ್ದಾರೆ. ಸಂಘದ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಸಂಘವು ಹಿಂದೆ  ಜಮೀನು  ಕೊಂಡ ದರದಲ್ಲಿಯೇ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಸಹಕಾರ ಸಂಘಗಳ ಇತಿಹಾಸದಲ್ಲಿಯೇ ಪ್ರಥಮ ಎಂದು ತಿಳಿಸಿದ ಮುಖ್ಯಮಂತ್ರಿಗಳು  ಸಂಘದ ಸದಸ್ಯರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.

ಶಿವರಾತ್ರಿ ರಾಜೇಂದ್ರ ಮಠದ  ಅಧ್ಯಕ್ಷರಾದ ನಂತರ ಸ್ವಾಮೀಜಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕರ್ನಾಟಕ ದೇಶ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಠದಲ್ಲಿಯೂ ಶಿಕ್ಷಣ ಕ್ಷೇತ್ರಗಳನ್ನು ಸ್ಥಾಪಿಸಿದ್ದಾರೆ. ಇದಕ್ಕೆ  ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಕಿದಾ ಅಡಿಪಾಯವೇ ಕಾರಣ. ಶಿಕ್ಷಣ ಬಹಳ ಮುಖ್ಯ ಎಂದರು.

Home add -Advt

ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ. ನಮ್ಮ ಸಮಾಜ ಸಾಮಾಜಿಕ ಜಾತಿ ವ್ಯವಸ್ಥೆಯಿಂದ ಕೂಡಿದೆ. ಈ ಕಾರಣದಿಂದ ಬಸವಣ್ಣನವರ ಕಾಲಕ್ಕಿಂತಲೂ ಹಿಂದೆ  ಶೂದ್ರ ಜನಾಂಗದವರು ಮತ್ತು ಮಹಿಳೆಯರು,  ಶಿಕ್ಷಣದಿಂದ ವಂಚಿತರಾಗಿದ್ದರು. ಮಹಿಳೆಯರಿಗೆ ಶಿಕ್ಷಣದ ಹಕ್ಕು ಸಿಕ್ಕಿದ್ದು ಬಸವಣ್ಣನವರ ಕಾಲದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಅನುಭವ ಮಂಟಪ ಎಂದು ಹೆಸರಿಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು, ಅನುಭವ ಮಂಟಪ ಜಗತ್ತಿನ ಮೊದಲನೇ ಸಂಸತ್ತು ಎಂದು ಕರೆಸಿಕೊಂಡಿದೆ. ಈ ಸಂಸತ್ತಿನಲ್ಲಿ ಜಾತಿ, ಧರ್ಮಗಳು ಇರಲಿಲ್ಲ. ಎಲ್ಲಾ ಧರ್ಮದವರೂ ಇಲ್ಲಿನ ಸಂಸತ್ತಿನಲ್ಲಿ ಪಾಲ್ಗೊಳ್ಳುತ್ತಿದ್ದರು. ಬಸವಣ್ಣನವರು ಅದಕ್ಕಾಗಿಯೇ ಅನುಭವ ಮಂಟಪ ನಿರ್ಮಿಸಿ ಜನರ  ಸಾಮಾಜಿಕ  ಅನುಭವಗಳನ್ನು ಚರ್ಚೆ ಮಾಡಿ ಅದಕ್ಕೆ ರೂಪ ಕೊಡುವ ಕೆಲಸವನ್ನು ಮಾಡಿದ್ದರು ಎಂದರು.

ಬಸವಣ್ಣ ವಿಶ್ವ ಮಾನವ ಸ್ವತಂತ್ರ ಭಾರತದಲ್ಲಿ ಇಂದು ಸಂಸತ್ತು, ವಿಧಾನಸಭೆಗಳಾಗಿವೆ. ಜನಪ್ರತಿನಿಧಿಗಳು ಸಂಸತ್ತು, ವಿಧಾನಸಭೆಗಳಲ್ಲಿ ಚರ್ಚೆ ಮಾಡುತ್ತೇವೆ. ಇಂಥ ವ್ಯವಸ್ಥೆ ಬಸವಣ್ಣನವರ ಕಾಲದಲ್ಲಿಯೇ ಇತ್ತು. ಸಮಾಜದ ಭವಿಷ್ಯದ ಬಗ್ಗೆ, ಕೊಳಕುಗಳನ್ನು ತೆಗೆದುಹಾಕುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಇರಿಸಲು ಆದೇಶ ಹೊರಡಿಸಲಾಗಿತ್ತು. ಈ ಬಾರಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ತೀರ್ಮಾನಿಸಿದೆ ಎಂದರು.

ಜಾತ್ಯತೀತ ಸಮಾಜ ನಿರ್ಮಾಣದ ಕನಸು

ಬಸವಣ್ಣನವರು ಯಾವುದೇ ಜಾತಿ, ಧರ್ಮ, ಪಂಗಡಕ್ಕೆ ಸೇರಿದವರಲ್ಲ. ಅವರು ವಿಶ್ವ ಮಾನವರಾಗಿದ್ದವರು. ಸಮಾಜ ಜಾತ್ಯತೀತ, ಅಸಮಾನತೆಯಿಂದ ಮುಕ್ತವಾಗಬೇಕೆಂಬ  ಕನಸನ್ನು ಕಂಡಿದ್ದರು. ಸಮ ಸಮಾಜ ನಿರ್ಮಾಣದ ಕನಸನ್ನು ಕಂಡಿದ್ದಷ್ಟೇ ಅಲ್ಲದೇ ಅನುಭವ ಮಂಟಪದಲ್ಲಿ ಎಲ್ಲರಿಗೂ ಮುಕ್ತ ಅವಕಾಶಗಳನ್ನು ಒದಗಿಸಿದ್ದರು. ತಾವು ಅಧ್ಯಕ್ಷರಾಗದೇ ತಳಸಮುದಾಯದಿಂದ ಬಂದ  ಅಲ್ಲಮ ಪ್ರಭುವನ್ನು ಅಧ್ಯಕ್ಷನನ್ನಾಗಿ ಮಾಡಿದರು. ಜಾತ್ಯತೀಯ, ಸಮಾನತೆ, ಸ್ವತಂತ್ರ, ಮೇಲು ಕೀಳು ಎಂಬ ಬೇಧಭಾವವಿಲ್ಲದೆ ಎಲ್ಲರೂ ಮನುಷ್ಯರಾಗಿ ಬಾಳುವ ಕನಸು ಬಸವಣ್ಣ ಕಂಡಿದ್ದರು. ಇದಕ್ಕೂ ಹಿಂದೆ ಬುದ್ಧ ಕೂಡ ಇಡೀ ಪ್ರಯತ್ನ ಮಾಡಿದ್ದರು. ಇಷ್ಟೆಲ್ಲಾ ಆದರೂ ಜಾತಿ ವ್ಯವಸ್ಥೆ ನಮ್ಮಲ್ಲಿ ಬೇರೂರಿದೆ. ಸ್ವಾತಂತ್ರ್ಯ ದೊರೆತು 78 ವರ್ಷಗಳಾದರೂ  ಜಾತಿ ಹೋಗಿಲ್ಲವೆಂದರೆ ಜಾತಿ ಅಷ್ಟು  ಆಳವಾಗಿ ಬೇರೂರಿದೆ ಎಂದರು.

ಆರ್ಥಿಕ, ಸಾಮಾಜಿಕ ಶಕ್ತಿ ದೊರೆತಾಗ ಮಾತ್ರ ಜಾತಿ ವ್ಯವಸ್ಥೆಗೆ ಚಲನೆ

ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಈ ವ್ಯವಸ್ಥೆಗೆ ಚಲನೆ ಬರುತ್ತದೆ. ನಮ್ಮ ನಡುವಿನ ಪಟ್ಟಭದ್ರ ಹಿತಾಸಕ್ತಿಗಳು ಈ ಜಾತಿ ವ್ಯವಸ್ಥೆಗೆ ಸಾಮಾಜಿಕ, ಆರ್ಥಿಕ ಶಕ್ತಿ ಬರದ ಹಾಗೆ ನೋಡಿಕೊಳ್ಳುತ್ತಿದ್ದಾರೆ ಎಂದರು.

ಜಾತಿ ವ್ಯವಸ್ಥೆ ಬಾವಿಯೊಳಗಿನ ಸತ್ತೆಯ ಹಾಗೆ. ಬಾವಿಗೆ ಬಿಂದಿಗೆ ಹಾಕಿದಾಗ ಸತ್ತೆ ದೂರ ಸರಿಯುತ್ತದೆ. ಬಿಂದಿಗೆ ಮೇಲೆತ್ತಿದ್ದರೆ ಸತ್ತೆ ಮತ್ತೆ ಕೂಡಿಕೊಳ್ಳುತ್ತದೆ. ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಕೂಡಾ ಹೀಗಿದೆ ಎಂದರು.

ಅದಕ್ಕೆ ಬಸವಣ್ಣನವರು 850 ವರ್ಷಗಳ ಹಿಂದೆಯೇ “ಇವನಾರವ ಇವನಾರವ ಎಂದೆಣಿಸದರಿ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯಾ”  ಎಂದು ಹೇಳಿದ್ದರು. ಈ ವಚನ ಎಲ್ಲರಿಗೂ ಗೊತ್ತಿದ್ದರೂ. ಈಗಲೂ ವಿದ್ಯಾವಂತರಾದ ನಾವೂ ಸಹ ನೀವು ಯಾವ ಜಾತಿಗೆ ಸೇರಿದವರು ಎಂದು ಕೇಳುವುದು ಸಾಮಾನ್ಯವಾಗಿದೆ . ಬಸವಾದಿ ಶರಣರು ಇದನ್ನು ಬಯಸಿರಲಿಲ್ಲ. ಜಾತಿ, ವರ್ಗಗಳ ನಿರ್ಮೂಲನೆಗೆ ಪಣ ತೊಟ್ಟು, ಎಲ್ಲರೂ ಮನುಷ್ಯರಾಗಿ ಬಾಳಬೇಕೆಂದು ಬಯಸಿದ್ದರು.  ಅದಕ್ಕಾಗಿಯೇ ಅನುಭವ ಮಂಟಪ ಅಸ್ತಿತ್ವಕ್ಕೆ ಬಂದಿದ್ದು ಎಂದರು. 

ಜಾತ್ಯತೀತ ಸಮಾಜ ನಿರ್ಮಾಣಕ್ಕೆ  ಮಂಟಪ ಕಾರಣವಾಗಲಿ ಇಂದು ಇಲ್ಲಿ ಉದ್ಘಾಟನೆ ಗೊಂಡಿರುವ ಈ ಮಂಟಪ ಜಾತ್ಯತೀತ ಸಮಾಜ ನಿರ್ಮಾಣಕ್ಕೆ  ಕಾರಣವಾಗಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಪೂಜ್ಯ ರಾಜೇಂದ್ರ ಸ್ವಾಮೀಜಿಗಳು ಅಕ್ಷರ ದಾಸೋಹ, ಅನ್ನ ದಾಸೋಹಕ್ಕೆ ಹೆಸರಾದವರು. ದಾಸೋಹದ ಅರ್ಥ ‘ಉತ್ಪಾದಿಸುವುದು ಮತ್ತು ಹಂಚುವುದು’ ಎಂಬುದಾಗಿದೆ. ಅದು ಇಲ್ಲಿ ಅರ್ಥಪೂರ್ಣವಾಗಿ ಆಚರಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದಂತೆ, ಸಮಾಜದ ಎಲ್ಲರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾವಲಂಬನೆ ಬಂದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅದು  ನಿರರ್ಥಕ. 

ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ ನಿರ್ಮಾಣ ಆಗಿರುವುದು ಎಂದರು.

ಗ್ಯಾರಂಟಿ ಯೋಜನೆಗಳಿಗೆ 1ಲಕ್ಷ ಕೋಟಿ ರೂಪಾಯಿ ವೆಚ್ಚ ಅಸಮಾನತೆಗಳನ್ನು ತೊಡೆಯುವ ಉದ್ದೇಶದಿಂದ,  ಕಳೆದ ಬಾರಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಪ್ರಥಮ ಹೆಜ್ಜೆಯಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು. 

ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಉದ್ದೇಶವೂ ಕೂಡಾ ಇದೇ ಆಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ 

 ಸರ್ಕಾರ ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ 1ಲಕ್ಷ ಕೋಟಿ ರೂಪಾಯಿಗಳನ್ನು  ವೆಚ್ಚ ಮಾಡಿದೆ ಎಂದರು.

ಸಮ ಸಮಾಜ ನಿರ್ಮಾಣ ಮಾಡಿ ಸಹಬಾಳ್ವೆ ರೂಢಿಸಿಕೊಳ್ಳಬೇಕು ಬಸವಣ್ಣನವರು ಹೇಳಿದಂತೆ ಜಾತಿ ರಹಿತ, ವರ್ಗ ರಹಿತ ಸಮಾಜ ನಿರ್ಮಾಣ ಆಗಬೇಕು . ಎಲ್ಲರೂ ಮನುಷ್ಯರಾಗಿ ಬಾಳಬೇಕು. ಸಂವಿಧಾನದ ಆಶಯವೂ ಅದೇ- ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವ.

ಆದ್ದರಿಂದ  ನಾವೆಲ್ಲರೂ ಸಮ ಸಮಾಜ ನಿರ್ಮಾಣ ಮಾಡಿ ಸಹಬಾಳ್ವೆ ರೂಢಿಸಿಕೊಳ್ಳಬೇಕು. ಇದನ್ನು ಅನುಭವ ಮಂಟಪ ಸಾಕಾರಗೊಳಿಸಲಿ ಎಂದರು.

Related Articles

Back to top button