
ಪ್ರಗತಿವಾಹಿನಿ ಸುದ್ದಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ 11ವರ್ಷದ ಮಗನೊಂದಿಗೆ ಮಹಡಿಯಿಂದ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗ್ರೇಟರ್ ನೊಯ್ಡಾದಲ್ಲಿರುವ ತಮ್ಮ ಫ್ಲಾಟ್ ನ 14ನೇ ಮಹಡಿಯಿಂದ ಹಾರಿ ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಕ್ಷಿ ಚಾವ್ಲಾ ಹಾಗೂ ಮಗ ದಕ್ಷ ಮೃತರು.
ಸಾಕ್ಷಿ ಚಾವ್ಲಾ, ಪತಿ ದರ್ಪಣ್ ಹಾಗೂ ಮಗ ದಕ್ಷನೊಂದಿಗೆ ಗ್ರೇಟರ್ ನೊಯ್ಡಾದ ಏಸ್ ಸಿಟಿಯಲ್ಲಿ ವಾಸವಾಗಿದ್ದರು. ಮಗ ದಕ್ಷ ಸುದೀರ್ಘ ಕಾಲದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಚಿಕಿತ್ಸೆ ಪಡೆಯುತ್ತಿದ್ದರೂ ತಾಯಿ ಸಾಕ್ಷಿಗೆ ಮಗನ ಆರೋಗ್ಯದ ಬಗ್ಗೆಯೇ ಚಿಂತೆಯಾಗಿತ್ತು. ಇದರಿಂದ ಒತ್ತಡಕ್ಕೆ ಒಳಗಾಗಿದ್ದ ಸಾಕ್ಷಿ ಮಗನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆ ವೇಳೆ ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ ಪತಿ ದರ್ಪಣ್ ಮನೆಯ ಇನ್ನೊಂದು ರೂಮ್ ನಲ್ಲಿದ್ದರು. ಈ ವೇಳೆ ತಾಯಿ ಮಗ ಇಬ್ಬರೂ ಮನೆ ಮಹಡಿಯಿಂದ ಹಾರಿ ಸಾವಿಗೆ ಶರಣಾಗಿದ್ದಾರೆ. ಕಿರುಚಾಟ ಕೇಳಿ ಮನೆಯಿಂದ ಹೊರಬಂದು ಬಾಲ್ಕನಿಯಿಂದ ನೋಡಿದಾಗ ನನ್ನ ಪತ್ನಿ ಹಾಗೂ ಮಗ ಇಬ್ಬರೂ ಕೆಳಗೆ ಬಿದ್ದಿದ್ದರು ಎಂದು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.