*ಮಹಿಳೆಯರಿಗೆ ಮೋಸ ಮಾಡಿದರೆ, ಹಗುರವಾಗಿ ಪರಿಗಣಿಸಿದರೆ ಸಹಿಸಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಅತ್ಯಂತ ಸ್ವಾಭಿಮಾನದ ಜೀವನ ನಡೆಸುವ ಮಹಿಳೆಯರಿಗೆ ಯಾರೂ ಮೋಸ, ಅನ್ಯಾಯ. ಮಾಡಲು ಹೋಗಬಾರದು. ಮಹಿಳೆಯರನ್ನು ಹಗುರವಾಗಿ ಪರಿಗಣಿಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಎಚ್ಚರಿಕೆ ನೀಡಿದರು.
ಬೆಳಗಾವಿಯ ಪಶು ಸಂಗೋಪನೆ ಇಲಾಖೆಯ ಸಭಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಧಾರವಾಡದಲ್ಲಿ ನಡೆಯಲಿರುವ ಕೃಷಿ ಮೇಳ 2025 ರ ಕಾರ್ಯಕ್ರಮಕ್ಕೆ ತೆರಳುತ್ತಿರುವ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಸಚಿವರು, ಇತ್ತೀಚೆಗೆ ಮೈಕ್ರೋ ಫೈನಾನ್ಸ್ ನವರು ಮಹಿಳೆಯರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೊತೆಗೆ ಕೆಲವು ಅಧಿಕಾರಿಗಳೂ ಮಹಿಳೆಯರನ್ನು ಹಗುರವಾಗಿ ಪರಿಗಣಿಸುವುದನ್ನು ಕಾಣುತ್ತಿದ್ದೇವೆ. ಇಂತವುಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು, ಯಾರಿಂದಲೂ ಮೋಸಕ್ಕೊಳಗಾಗಬೇಡಿ. ಎಚ್ಚರಿಕೆಯಿಂದಿರಿ ಎಂದು ಮಹಿಳೆಯರಿಗೆ ಕರೆ ನೀಡಿದರು.
ಮಹಿಳೆ ಎಂದರೆ ಸಂಕಷ್ಟ, ಕೆಲಸ ಮಾಡಿ ಸ್ವಾಭಿಮಾನದ ಬದುಕಿಗಾಗಿ ಸಂಘ ಕಟ್ಟಿದ್ದೀರಿ. ಮಹಿಳೆ ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಹುದು ಎಂದು ಸಾಧನೆ ಮಾಡಿ ತೋರಿಸಿದ್ದೀರಿ, ಮಹಿಳೆಯರ ಸಾಧನೆಯನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಮಹಿಳೆಯರಿಗೆ ಅನುಕೂಲಕರ ಯೋಜನೆಗಳನ್ನು ರೂಪಿಸಿದೆ. ನರೇಗಾ ಮಾಡಿದ್ದು ಕಾಂಗ್ರೆಸ್, ಸ್ಥಳೀಯ ಸಂಸ್ಥೆಗಳಲ್ಲಿ 50% ಮೀಸಲಾತಿ, ಬಿಸಿಯೂಟ ಯೋಜನೆ, ಆಶಾ ಕಾರ್ಯಕರ್ತೆರ ನೇಮಕ, ಗೃಹಲಕ್ಷ್ಮೀ ಯೋಜನೆ ಇವೆಲ್ಲವೂ ಕಾಂಗ್ರೆಸ್ನ ಯೋಜನೆಗಳು. ಮನೆ ಬೆಳಗುವುದೂ ಮಹಿಳೆಯರಿಂದಲೇ, ಆದ್ದರಿಂದ ಮಹಿಳೆಯ ಕೈಗೆ ಸ್ವಾಭಿಮಾನದ ಅಧಿಕಾರ ಕೊಡಬೇಕು ಎಂದರು.
ಬ್ರಿಟೀಷರು ಭಾರತ ಬಿಟ್ಟು ಹೋಗುವಾಗ ನಮಗೆ ಊಟ ಮಾಡಲು ಗತಿ ಇರಲಿಲ್ಲ. ಇಂದು ಸ್ವಾಭಿಮಾನದ ಸ್ಥಿತಿಗೆ ಬಂದಿದೆ. ಇದು ಕಾಂಗ್ರೆಸ್ ಸಾಧನೆ, ಖಾಸಗಿ ಫೈನಾನ್ಸ್ ಹಾವಳಿಗೆ ಮೋಸಕ್ಕೆ ಬಲಿಯಾಗಬೇಡಿ, ಸಂಜೀವಿನಿ ಸಂಘದವರು ಮಹಿಳೆಯರಿಗೆ ಸಹಾಯ ಮಾಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಹಿಳೆಯರಿಗೆ ನ್ಯಾಯ ಕೊಡಬೇಕು, ಸಹಕಾರ ಕೊಡಬೇಕು, ಮಹಿಳೆಯರನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ. ಮಹಿಳೆ ಅಬಲೆಯಲ್ಲ ಸಬಲೆ ಎಂದು ನಿರೂಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಈ ವೇಳೆ ನಿರ್ಮಲಾ ತಿಗಡಿ, ಮಲ್ಲಿಕಾರ್ಜುನ ಕೆಳಕರ್, ಡಾ.ಆನಂದ ಪಾಟೀಲ, ಡಾ.ರವಿ ಸಾಲಿಗೌಡರ್, ಪ್ರದೀಪ್ ಸಾವಂತ, ಮಹಾದೇವ್ ಪಟಗುಂದಿ, ಮಹೇಶ ಭಜಂತ್ರಿ, ಸಂಘದ ಸದಸ್ಯೆಯರು, ಪಶು ಸಖಿಯರು, ಕೃಷಿ ಸಖಿಯರು ಮುಂತಾದವರು ಉಪಸ್ಥಿತರಿದ್ದರು.