*ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು: ತಾಯಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ: ಬಾನು ಮುಷ್ತಾಕ್*

ಪ್ರಗತಿವಾಹಿನಿ ಸುದ್ದಿ: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅದ್ಧೂರಿಯಾಗಿ ಚಾಲನೆ ನೀಡಿದ್ದಾರೆ. ಎಷ್ಟೇ ಅಡೆತಡೆಗಳು ಎದುರಾದರೂ ಏನೇ ಹೋರಾಟಗಳು ನಡೆದರೂ ತಾಯಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ ಎಂದು ಬಾನು ಮುಷ್ತಾಕ್ ಹೇಳಿದ್ದಾರೆ.
ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಾನು ಮುಷ್ತಾಕ್, ಇದು ನನ್ನ ಜೀವನದ ಅತ್ಯಂತ ಗೌರವದ ಘಳಿಗೆ. ಚಾಮುಂಡಿ ತಾಯಿ ಕೃಪಾಶಿರ್ವಾದದಿಂದ ನಾನು ಇಂದು ದಸರಾ ಉದ್ಘಾಟಿಸಿದ್ದೇನೆ ಎಂದರು.
ನನಗೆ ಬೂಕರ್ ಪ್ರಶಸ್ತಿ ಬಂದರೆ ನನ್ನನ್ನು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ನನ್ನ ಆಪ್ತ ಸ್ನೇಹಿತೆಯೊಬ್ಬಳು ಹರಕೆ ಹೊತ್ತಿದ್ದಳು. ಆದರೆ ಕಾರಣಾಂತರದಿಂದಾಗಿ ನನಗೆ ಚಾಮುಂಡಿ ದರ್ಶನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈಗ ಕರ್ನಾಟಕ ಸರ್ಕಾರದ ಮೂಲಕವಾಗಿ ತಾಯಿ ಚಾಮುಂಡಿ ದೇವಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ. ಇದು ನನ್ನ ಜೀವನದ ಗೌರವದ ಕ್ಷಣ ಎಂದರು.
ತಾಯಿ ಚಾಮುಂಡಿ ಶಕ್ತಿಯ, ಧೈರ್ಯದ, ಮಮತೆಯ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣತೆಯನ್ನು ದೇವಿ ನಾಶ ಮಾಡಲಿ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ನಾಡಿನ ನೆಲದ ಸುಗಂಧ ಐಕ್ಯತೆಯಿಂದ ಬೆಳೆಯಲಿ. ದಸರಾ ಕೇವಲ ಮೈಸೂರು, ನಾಡು, ದೇಶಕ್ಕೆ ಮಾತ್ರ ಸೀಮಿತವಾಗದೇ ಇಡೀ ಪ್ರಪಂಚದಾದ್ಯಂತ ನೆಲೆ ಕಂಡುಕೊಳ್ಳಲಿ ಎಂದರು.
ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶ ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ದೂರ ತಳ್ಳುವುದಿಲ್ಲ. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಳ್ಳುತ್ತಾನೆ. ನಾವೇ ಈ ಗಡಿಗಳನ್ನು ಅಳಿಸಿ ಹಾಕಿಕೊಳ್ಳಬೇಕು. ದಸರಾ ಉದ್ಘಾಟನೆಗೆ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಹಲವಾರು ವಿರೋಧ, ಹೋರಾಟಗಳು ನಡೆದವು. ಆದರೆ ಎಲ್ಲಾ ಅಡೆತಡೆಗಳ ನಡುವೆಯೂ ನನ್ನು ಆಯ್ಕೆ ಮಾಡಿದ ಸಿಎಂ ಸಿದ್ದರಾಮಯ್ಯನವರಿಗೆ ಧನ್ಯವಾದಗಳು ಎಂದು ತಿಳಿಸಿದರು.