
ಪ್ರಗತಿವಾಹಿನಿ ಸುದ್ದಿ: ತಂದೆ-ತಾಯಿಗಳ ನಿರ್ಲಕ್ಷ್ಯಕ್ಕೆ ನವಜಾತ ತ್ರಿವಳಿ ಶಿಶುಗಳು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಆನೇಕಲ್ ನಲ್ಲಿ ನಡೆದಿದೆ.
ಆನಂದ್ ಹಾಗೂ ಮಂಜುಳಾ ದಂಪತಿಯ ತ್ರಿವಳಿ ಮಕ್ಕಳು ಮೃತಪಟ್ಟಿದ್ದಾರೆ. ಮನೆಯವರ ವಿರೋಧದ ನಡುವೆಯೂ ಆನಂದ್ ಹಾಗೂ ಮಂಜುಳಾ ಪ್ರೀತಿಸಿ ವಿವಾಹವಾಗಿದ್ದರು. ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮಂಜುಳಾ ಆರು ತಿಂಗಳ ಗರ್ಭಿಣಿಯಾಗಿದ್ದಳು. ಗರ್ಭಿಣಿಯಾದರೂ ಮಂಜುಳಾ ಪೋಷಕರಾಗಲಿ, ಆನಂದ್ ಪೋಷಕರಾಗಲಿ ಕಾಳಜಿ ತೋರುತ್ತಿರಲಿಲ್ಲ, ಆರು ತಿಂಗಳ ಗರ್ಭಿಣಿಯಾದರೂ ಕೆಲಸಕ್ಕೆ ಹೋಗಿ ದುಡುದು ತಿನ್ನಬೇಕಾದ ಸ್ಥಿತಿ. ಸೂಕ್ತ ತಪಾಸಣೆ, ಪೋಷಣೆ ಮಾಡಿಕೊಂಡಿಲ್ಲ. ಕೆಲಸ ಮಾಡುತ್ತಿದ್ದ ವೇಳೆ ಮಂಜುಳಾಗೆ ತೀವ್ರ ಹೊಟ್ಟೆನೋವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಂಜುಳಾಳನ್ನು ಪತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಪಾಸಣೆ ನಡೆಸಿದಾಗ ಓರ್ವ ಮಗು ಸಾವನ್ನಪ್ಪಿರುವುದು ತಿಳಿದುಬಂದಿದೆ. ಚಿಕಿತ್ಸೆ ಮುಂದುವರೆದಿರುವಾಗಲೇ ಮತ್ತೆ ಇಬ್ಬರು ಮಕ್ಕಳೂ ಹೊಟ್ಟೆಯಲ್ಲಿಯೇ ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ನವಜಾತ ಶಿಶುಗಳನ್ನು ಹೊರತೆಗೆಯಲಾಗಿದೆ. ಸದ್ಯ ಮಂಜುಳಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಗರ್ಭಿಣಿಯಾಗಿದ್ದರೂ ನಿರ್ಲಕ್ಷ್ಯ, ಆರೈಕೆ, ಪೋಷಣೆ ಇಲ್ಲದೇ ಇರುವುದೇ ನವಜಾತ ಶಿಶುಗಳ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.