
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲು ಕೃಷಿ ಇಲಾಖೆ ದೇಸಿ ಬೀಜ ಬ್ಯಾಂಕ್ ಯೋಜನೆಯನ್ನು ರೂಪಿಸಿದೆ.
ರಾಜ್ಯಾದ್ಯಂತ ಸುಮಾರು 1000 ತಳಿಗಳನ್ನು ಗುರುತಿಸಿ ಬೀಜ ಬ್ಯಾಂಕ್ ಮಾಡಬೇಕೆಂಬ ಉದ್ದೇಶ ಹೊಂದಲಾಗಿದೆ. ಈಗಾಗಲೇ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಜಿಲ್ಲೆಯಿಂದ 31 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಆಯಾ ಸ್ಥಳೀಯ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಗುರುತಿಸುವಿಕೆ, ಸಂರಕ್ಷಣೆ. ಗುರುತಿಸಿದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡುವುದು, ವಿಶೇಷ ತಳಿಗಳನ್ನು ಬೆಳೆಯುತ್ತಿರುವ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ದೇಸಿ ತಳಿಗಳ ಸಂರಕ್ಷಣೆಗಾಗಿ ರಾಜ್ಯ ಸರಕಾರ ದೇಸಿ ಬೀಜ ಬ್ಯಾಂಕ ಯೋಜನೆಯನ್ನು ರೂಪಿಸಿದ್ದು, ಕೆ-ಕಿಸಾನ್ ಆಪ್ ನಲ್ಲಿ ರೈತರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.