
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸದೇ ಇರಲು ₹10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ, ನಿಪ್ಪಾಣಿ ವೃತ್ತದ ಕಾರ್ಮಿಕ ನಿರೀಕ್ಷಕ ನಾಗಪ್ಪ ಯಲ್ಲಪ್ಪ ಕಳಸಣ್ಣವರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಮಹಾರಾಷ್ಟ್ರದ ಇಚಲಕರಂಚಿಯ ನಿವಾಸಿ ರಾಜು ಲಕ್ಷ್ಮಣ ಪಾಚ್ಚಾಪೂರೆ ಎನ್ನುವವರು ನೀಡಿದ ದೂರಿನ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು.
ರಾಜು ಅವರು ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮದ ಬಳಿ ಆರ್.ಪಿ.ಪ್ರೊಡಕ್ಷನ್ ಕಾರ್ಖಾನೆ ತೆರೆದಿದ್ದಾರೆ. ಆರೋಪಿ ನಾಗಪ್ಪ ಇದನ್ನು ತಪಾಸಣೆ ಮಾಡಿ ಕಾರಣ ಕೇಳಿ ಪೋಸ್ಟ್ ಮೂಲಕ ನೋಟಿಸ್ ನೀಡಿದ್ದರು. ಈ ನೋಟಿಸ್ ಹಿಂದಕ್ಕೆ ಪಡೆದು ಪ್ರಕರಣ ರದ್ದು ಮಾಡಿ, ನ್ಯಾಯಾಲಯ ಮೆಟ್ಟಿಲು ಏರದಂತೆ ಮಾಡಲು ₹10 ಸಾವಿರ ಲಂಚ ಕೊಡಬೇಕು ಎಂದು ಕೇಳಿದ್ದರು.
ಈ ಸಂಗತಿಯನ್ನು ಲೋಕಾಯುಕ್ತರ ಗಮನಕ್ಕೆ ತಂದ ರಾಜು ಅವರು, ಉಪಾಯದಂತೆ ಸೋಮವಾರ ಲಂಚ ಕೊಡಲು ಮುಂದಾದರು. ಆಗ ದಾಳಿ ಮಾಡಿದ ಅಧಿಕಾರಿಗಳು ಹಣದ ಸಮೇತ ಆರೋಪಿಯನ್ನು ಬಂಧಿಸಿದರು.
ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಎಸ್.ಆರ್. ಭರತರಡ್ಡಿ, ಸಿಪಿಐ ವೆಂಕಟೇಶ ಯಡಹಳ್ಳಿ, ಇನ್ಸ್ಪೆಕ್ಟರ್ ಸಂಗಮನಾಥ ಹೊಸಮನಿ ಹಾಗೂ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡರು.