*ದಸರಾ ಕಿಶೋರಿ ಪ್ರಶಸ್ತಿ ಭಾಜನ ವಿದ್ಯಾರ್ಥಿನಿಯರಿಗೆ ಸಚಿವ ಸತೀಶ್ ಜಾರಕಿಹೊಳಿ ಸತ್ಕಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ “ದಸರಾ ಕಿಶೋರಿ” ಪ್ರಶಸ್ತಿಗೆ ಭಾಜನರಾದ ಇಲ್ಲಿನ ಡಿ. ವೈ ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಪಾಟೀಲ್ ಸೇರಿದಂತೆ ಕುಸ್ತಿಯಲ್ಲಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿದರು.
ಕುವೆಂಪು ನಗರದ ಸ್ವಗೃದಲ್ಲಿ ಮೈಸೂರು ದಸರಾ ಮಹೋತ್ಸವದ ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ,ದ್ವೀತಿಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿಯರನ್ನು ಸತ್ಕರಿಸಿ ಅವರ ಸಮಸ್ಯೆಗಳಿಗೆ ಇದೇ ವೇಳೆ ಸಚಿವರು ಸ್ಪಂದಿಸಿದರು.
“ದಸರಾ ಕಿಶೋರಿ” ಪ್ರಶಸ್ತಿಯನ್ನು ಮೈಸೂರು ದಸರಾ ಮಹೋತ್ಸವದಲ್ಲಿ ರಾಜ್ಯ ಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ನೀಡಲಾಗುತ್ತದೆ.ಈ ಸ್ಪರ್ಧೆಯು ದಸರಾ ಕುಸ್ತಿ ಪಂದ್ಯಾವಳಿಯ ಒಂದು ಭಾಗವಾಗಿದ್ದು, ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗುತ್ತದೆ. ಅಂತಹ ಪ್ರಶಸ್ತಿಯನ್ನು ಬೆಳಗಾವಿಯ ಡಿ. ವೈ ಸ್ಪೋರ್ಟ್ಸ್ ಹಾಸ್ಟೆಲ್ ವಿದ್ಯಾರ್ಥಿನಿ ಸ್ವಾತಿ ಪಾಟೀಲ್ ಪಡೆದದ್ದು ಹೆಮ್ಮೆಯ ವಿಷಯ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸೀಪ್ (ರಾಜು) ಸೇಠ್, ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ್, ಡಿ. ವೈ ಸ್ಪೋರ್ಟ್ಸ್ ಹಾಸ್ಟೆಲ್ ನ ತರಬೇತಿದಾರರಾದ ಸ್ಮಿತಾ ಪಾಟೀಲ್, ಮಂಜುನಾಥ ಮಾದರ ಸೇರಿದಂತೆ “ದಸರಾ ಕಿಶೋರಿ” ಪ್ರಶಸ್ತಿಗೆ ಭಾಜನರಾದ ವಿದ್ಯಾರ್ಥಿನಿ ಸ್ವಾತಿ ಪಾಟೀಲ್ ಪೋಷಕರು ಉಪಸ್ಥಿತರಿದ್ದರು.