Belagavi NewsBelgaum NewsKannada NewsKarnataka NewsLatest

*ಎಂಇಎಸ್ ಗೆ ಶಾಕ್ ನೀಡಿದ ಬೆಳಗಾವಿ ಜಿಲ್ಲಾಡಳಿತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ನ.1 ರಂದು ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ವಿಜೃಂಭಣೆಯಿಂದ ಹಾಗೂ ಮಾದರಿ ರಾಜ್ಯೋತ್ಸವವನ್ನಾಗಿ ಆಚರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಬೆಳಗಾವಿ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ (ಅ.9) ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನ.1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸೂಚಿಸಿದರು. 

ರಾಜ್ಯೊತ್ಸವ ದಿನದಂದು ನಗರದಲ್ಲಿ ಲಕ್ಷಾಂತರ ಜನ ಸೇರುವುದರಿಂದ ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವದು. ಕನ್ನಡ ಪರ ಹೋರಾಟಗಾರರು ಹಾಗೂ ಸಾಧಕರಿಗೆ ಸನ್ಮಾನಿಸಲು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು. ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಸಾರ್ವಜನಿಕರಿಗಾಗಿ ಗ್ಯಾಲರಿ ವ್ಯವಸ್ಥೆ ಮಾಡಲು ತಿಳಿಸಿದರು.

Home add -Advt

ನ.1 ರಂದು ಜರುಗಲಿರುವ ರಾಜ್ಯೊತ್ಸವದ ಭವ್ಯ ಮೆರವಣಿಗೆ ಮಾರ್ಗದುದ್ದಕ್ಕೂ ಕನ್ನಡ ನಾಡಿನ ಮಹನಿಯರ ಭಾವಚಿತ್ರಗಳನ್ನು ಅಳವಡಿಸುವುದರ ಜೊತೆಗೆ ರೂಪಕಗಳಿಗೆ ಪ್ರಶಸ್ತಿ ನೀಡಲಾಗುವುದು. ಬೆಳಗಾವಿಯ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು 2 ಕೋಟಿ ರೂ.ಗಳ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.

ಕರಾಳ ದಿನಾಚರಣೆಗೆ ವಿರೋಧ

ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ವೇದಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಸಿದ್ಧತೆ, ಧ್ವಜಾರೋಹಣ, ಆಮಂತ್ರಣ ಪತ್ರಿಕೆ, ಪಥ ಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ ವಾಹನಗಳಿಗೆ ಅನುಮತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಕುರಿತು ಚರ್ಚಿಸಲಾಯಿತು.

ನಗರ ಪೋಲಿಸ್ ಆಯುಕ್ತರಾದ ಭೋರಸೆ ಗುಲಾಬರಾವ್ ಭೂಷಣ ಅವರು ಮಾತನಾಡಿ, ರಾಜ್ಯೋತ್ಸವ ದಿನದಂದು ಕನ್ನಡಪರ ಸಂಘಟನೆಗಳಿಂದ ಹಾಕಲಾಗುವ ವೇದಿಕೆಗಳ ವಿವರಗಳನ್ನು ನಿಡಿದಲ್ಲಿ ಈ ಕುರಿತು ಪರಿಶೀಲಿಸಿ ವೇದಿಕೆ ಸ್ಥಾಪನೆಗೆ ಅನುಕೂಲ ಮಾಡಿ ಕೊಡಲಾಗುವದು. ಮೆರವಣಿಗೆ ಸಂದರ್ಭದಲ್ಲಿ ಅಸಭ್ಯ ವರ್ತನೆ ತೋರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವದು ಎಂದರು.

ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರು ಮಾತನಾಡಿ, ಡಿ.ಜೆ. ಸಂಸ್ಕೃತಿಯನ್ನು ಬಿಟ್ಟು ಕನ್ನಡ ನಾಡಿನ ಸಂಸ್ಕತಿಯ ವಾದ್ಯಮೇಳಗಳನ್ನು ಬಳಸುವ ಮೂಲಕ ರಾಜ್ಯೋತ್ಸವದಲ್ಲಿ ಕನ್ನಡ ನಾಡಿನ ಪಾರಂಪರಿಕ ಸಂಸ್ಕೃತಿಗೆ ನಾಂದಿ ಹಾಡಲು ಹೇಳಿದರು.

ಕನ್ನಡ ಪರ ಹೋರಾಟಗಾರರಾದ ಶ್ರಿನಿವಾಸ ತಾಳೂಕರ ಅವರು ಮಾತನಾಡಿ, ಜಿಲ್ಲಾಡಳಿತವು ರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ನಾಮಫಲಕಗಳನ್ನು ರಾಜ್ಯೋತ್ಸವಕ್ಕೂ ಮುನ್ನ ಕನ್ನಡದಲ್ಲಿ ಅಳವಡಿಸಬೇಕು. ಸುವರ್ಣ ವಿಧಾನ ಸೌಧದ ಆವರಣದಲ್ಲಿ ತಾಯಿ ಭುವನೇಶ್ವರಿಯ 108 ಅಡಿಯ ಪ್ರತಿಮೆ ಸ್ಥಾಪನೆಗೆ, ಮುಂಜಾನೆಯ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ತಂಡಗಳ ಪ್ರದರ್ಶನವನ್ನು ಸಾಯಂಕಾಲವು ಚನ್ನಮ್ಮ ವೃತ್ತದಲ್ಲಿ ಪ್ರದರ್ಶಿಸಲು ಮನವಿ ಮಾಡಿದರು.

ಕನ್ನಡ ಪರ ಹೋರಾಟಗಾರರಾದ ಮಹದೇವ ತಳವಾರ ಅವರು ಮಾತನಾಡಿ, ಗಾಂಧೀ ಭಾರತ ಕಾರ್ಯಕ್ರಮ ಪ್ರಯುಕ್ತ ನಗರದಲ್ಲಿ ಮಾಡಲಾದ ದೀಪಾಲಂಕಾರ ಹಾಗೂ ಚಿಹ್ನೆಗಳ ದೀಪಾಲಂಕಾರ ಮಾಡುವಂತೆ ಮನವಿ ಮಾಡಿದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಡರಾತ್ರಿ ವರೆಗೆ ಬಸ್ ವ್ಯವಸ್ಥೆ, ರೂಪಕ ವಾಹನ ಹಾಗೂ ಮೆರವಣಿಗೆ ಚಾಲನೆಗೆ ಸಮಯ ನಿಗದಿಪಡಿಸಲು ಕೋರಿದರು.

ಕನ್ನಡ ಪರ ಹೋರಾಟಗಾರರಾದ ಅನಂತಕುಮಾರ ಬ್ಯಾಕೂಡ ಅವರು ಮಾತನಾಡಿ, ಬೆಳಗಾವಿ ರಾಜ್ಯೊತ್ಸವ ಆಚರಣೆಗಾಗಿ ಸರಕಾರದಿಂದ ಹೆಚ್ಚಿನ ಅನುದಾನ ತರುವ ನಿಟ್ಟಿನಲ್ಲಿ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಬೆಳಗಾವಿ ರಾಜ್ಯೋತ್ಸವ ಸಭೆಗೆ ಜಿಲ್ಲೆಯ ಶಾಸಕರು ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ದಸರಾ ಉದ್ಘಾಟನೆಯಂತೆ ಗಣ್ಯರಿಂದ ಬೆಳಗಾವಿಯ ರಾಜ್ಯೋತ್ಸವ ಉದ್ಘಾಟನೆಗೆ, ರಾಜ್ಯೋತ್ಸವ ದಿನದಂದು ರಕ್ತದಾನ ಶಿಬಿರ, ನೇತ್ರದಾನ ಶಿಬಿರಗಳನ್ನು ಆಯೋಜಿಸಲು ಮನವಿ.

ಮೆರವಣಿಗೆ ಸಂದರ್ಭದಲ್ಲಿ ಚನ್ನಮ್ಮ ವೃತ್ತದಿಂದ ಶನಿವಾರ ಕೂಟದ ವರೆಗೆ ವಿವಿಧ ಸಂಘಟನೆಗಳ ವೇದಿಕೆ ಸ್ಥಾಪನೆಗೆ ಅನುವು ಮಾಡಿಕೊಡಬೇಕು. ಸಾರ್ವಜನಿಕರಿಗೆ ಕುಡಿಯುವ ನೀರಿನ ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸುವ ಕುರಿತು. ರಾಜ್ಯೋತ್ಸವ ದಿನದಂದು ಮದ್ಯ ಮಾರಾಟ ನಿಷೇಧಿಸಲು, ಜಿಲ್ಲಾಡಳಿತದಿಂದ ಬೆಳವಡಿ ಮಲ್ಲಮಳ ರೂಪಕ ತಯಾರಿಸುವ ಕುರಿತು ವಿವಿಧ ಕನ್ನಡಪರ ಹೋರಾಟಗಾರರು, ಮುಖಂಡರುಗಳು ತಮ್ಮ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

Related Articles

Back to top button