*RPF ಸಿಬ್ಬಂದಿ ಸಮಯ ಪ್ರಜ್ಞೆ: ಉಳಿಯಿತು ರೈಲಿನಿಂದ ಬಿದ್ದ ವೃದ್ಧನ ಪ್ರಾಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಲಿಸುತ್ತಿದ ರೈಲಿನಿಂದ ಬಿದ್ದ ವೃದ್ಧರೊಬ್ಬರನ್ನು ಕ್ಷಣಾರ್ಧದಲ್ಲಿ ಆರ್ ಪಿ ಎಫ್ ಸಿಬ್ಬಂದಿ ರಕ್ಷಿಸಿದ ಘಟನೆ ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಈಗ ಎಲ್ಲೆಡೆ ಹರಿದಾಡಿದ್ದು ರೈಲ್ವೇ ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.
ಬೆಳಗಾವಿಯ ಉಚ್ಚಗಾಂವ ಸಮೀಪದ ಬಸುರತೆ ಗ್ರಾಮದ ನಿವಾಸಿಯಾದ ಬರಮಾ ಗಂಗರಾಮ ಕುಂಬಾರ (55) ಎಂಬುವರು ಬೆಳಗಾವಿ ಯಿಂದ ಪುಣೆಗೆ ತೆರಳುತ್ತಿದ್ದ ತಮ್ಮ ಮೊಮ್ಮಗ ಲಕ್ಷ್ಮಿ ರಾಜಾರಾಮ ಕುಂಬಾರ ಅವರನ್ನು ಮೈಸೂರು-ಅಜೀರ್ ಎಕ್ಸ್‌ಪ್ರೆಸ್ ರೈಲಿಗೆ ( ಸಂಖ್ಯೆ 16210) ಬೀಳ್ಕೊಡಲು ಬಂದಿದ್ದರು. ಇವರು ಇನ್ನೂ ಬೋಗಿಯಲ್ಲಿರುವಾಗಲೇ ರೈಲು ಚಲಿಸಲು ಪ್ರಾರಂಭಸಿತ್ತು. ಬೀಳ್ಕೊಡಲು ಬಂದಿದ್ದ ಬರಮಾ ಗಂಗಾರಾಮ ಅವರು ಆತಂಕಗೊಂಡು ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿದ್ದರು.
ಆಗ ಜಾರಿಬಿದ್ದ ಅವರು ಪ್ಲಾಟ್ ಫಾರ್ಮ್ ಹಾಗೂ ರೈಲಿನ ನಡುವಿನ ಚಿಕ್ಕ ಜಾಗದಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಸ್ಥಳದಲ್ಲಿದ್ದ ಕರ್ತವ್ಯ ನಿರತ RPF ಹೆಡ್ ಕಾನ್ಸಟೇಬಲ್ ಸಿಐ ಕೊಪ್ಪದ ಅವರು ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿದ್ದರು. ಧೈರ್ಯದಿಂದ ಮುನ್ನುಗಿ ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದರು. ಬಳಿಕ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಈಗ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.
ಹೆಡ್ ಕಾನ್ಸಟೇಬಲ್ ಸಿ. ಐ. ಕೊಪ್ಪದ ಅವರ ಜಾಗರೂಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಅನಾಹುತವೊಂದು ತಪ್ಪಿದ್ದು ಇವರ ಈ ಸಾಹಸಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ.