*ರಾಯಣ್ಣ ಮ್ಯೂಸಿಯಂ ಶೀಘ್ರ ಲೋಕಾರ್ಪಣೆಗೆ ಸಿದ್ಧತೆ: ಸಚಿವ ಶಿವರಾಜ ತಂಗಡಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡದಲ್ಲಿ ನಿರ್ಮಿಸಲಾಗಿರುವ ‘ವೀರಭೂಮಿ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ’ಗೆ ಮಂಗಳವಾರ (ಅ.14) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲಿಸಿದರು.
ನಂದಗಡ ಮ್ಯೂಸಿಯಂ ವೀರಭೂಮಿ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಮುಖ್ಯ ದ್ವಾರ, ಸಂಗೊಳ್ಳಿ ರಾಯಣ್ಣ ಸ್ಮರಣೀಯ ಪ್ರತಿಮೆಗಳು, ಸಾರ್ವಜನಿಕ ಪ್ರವೇಶದ ಟಿಕೆಟ್ ಕೌಂಟರ್, ಅಲೋಪಹಾರ ಗೃಹ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕಂಪೌಂಡ್, ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಚನೆ ನೀಡಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ ಸದ್ಯ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಉದ್ಘಾಟನೆಗೊಳಿಸಿ ಇನ್ನೂ 28 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇನ್ನುಳಿದ ಕಾಮಗಾರಿಗಳ ಪ್ರಾರಂಭಿಸುವ ಕುರಿತು ಈಗಾಗಲೇ ಪ್ರಸ್ತಾವನೆ ಸಿದ್ಧವಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಯೋಜನೆಗಳಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ 29ನೇ ತಾರೀಕು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು.
ನಂದಗಡದ ರಾಯಣ್ಣ ಮೂರ್ತಿಯ ಕೆಳಗಡೆ ಕೆರೆ ಇರುವುದರಿಂದ ಕೆರೆಗೆ ಊರಿನ ಚರಂಡಿ ನೀರು ಬರುತ್ತಿದೆ ಅದಕ್ಕೆ ತಡೆಗೋಡೆ ನಿರ್ಮಿಸಲು ಜಿಲ್ಲಾ ಪಂಚಾಯತ್ ಅನುದಾನದಲ್ಲಿ 2 ಕೋಟಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಈಗಾಗಲೇ 50 ಲಕ್ಷ ಅನುದಾನ ಜಿ.ಪಂ ಸಿ.ಇ.ಓ ಕಾಯ್ದಿರಿಸಿದ್ದಾರೆ ಇದನ್ನು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಸಚಿವ ತಂಗಡಗಿ ತಿಳಿಸಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಮಾತನಾಡಿ ರಾಯಣ್ಣನ ಶೌರ್ಯ ಭೂಮಿ ಸಂಗೊಳ್ಳಿಯಲ್ಲಿ ರಾಯಣ್ಣ ಜೀವನ ಚರಿತ್ರೆ ಸಾರುವ ಮೂರ್ತಿಗಳಿರುವ ರಾಕ್ ಗಾರ್ಡನ್ ನಿರ್ಮಾಣ ಮಾಡಲಾಗಿದ್ದು, ಸಾಕಷ್ಟು ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರು.
ಅದೇ ರೀತಿಯಲ್ಲಿ ದೇಶದಲ್ಲಿ ಉತ್ತಮ ಶಾಲೆಗಳಲ್ಲಿ ಸಂಗೊಳ್ಳಿಯ ಸೈನಿಕ ಶಾಲೆ ಕೂಡ ಒಂದಾಗಿದ್ದು, ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟದ ಶಾಲೆ ನಿರ್ಮಾಣ ಮಾಡಲಾಗಿದೆ. ಸೈನಿಕ ಶಾಲೆ ಸಂಗೊಳ್ಳಿ ಭಾಗದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಶಾಲೆಯ ಪ್ರವೇಶಕ್ಕೆ ಸ್ಥಳೀಯ ಮತ್ತು ರಾಜ್ಯದ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಠ್ಯ, ಪತ್ಯೇತರ, ಎನ್.ಸಿ.ಸಿ ಸೇರಿದಂತೆ ಸಾಕಷ್ಟು ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿದೆ ಎಂದು ಹೆಚ್.ಎಂ.ರೇವಣ್ಣ ಹೇಳಿದರು.
ರಾಯಣ್ಣನ ಸ್ಮರಣೀಯ ಸ್ಥಳಗಳು ಪ್ರವಾಸಿ ಸ್ಥಳವಾಗಬೇಕು ಎಂಬ ಯೋಜನೆಯಿಂದ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಬರುವ ದಿನಗಳಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ಮ್ಯೂಸಿಯಂ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಆಯ್ಕೆಮಾಡಿ ಪ್ಯಾಕೇಜ್ ಮೂಲಕ ಪ್ರವಾಸಿಗರಿಗೆ ಬಸ್ ಸೌಲಭ್ಯ ಕಲ್ಪಿಸುವ ಯೋಜನೆಯಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು.