*ಶುಭಂ ಶೆಳಕೆ ಭಯೋತ್ಪಾದಕ: ದೀಪಕ ಗುಡಗನಟ್ಟಿ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಅವರ ವಿರುದ್ಧ ನಾಲಿಗೆ ಹರಿ ಬಿಟ್ಟಿರುವ ಎಂಇಎಸ್ ಮುಖಂಡ ಶುಭಂ ಶೆಳಕೆ ವಿರುದ್ಧ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡ ಶುಭಂ ಶೆಳಕೆ ಬೆಳಗಾವಿಯ ಭಯೋತ್ಪಾದಕ. ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಬೆಳಗಾವಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ.
ಗಡಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಅನ್ನೋನ್ಯವಾಗಿ ಬದುಕುತ್ತಿದ್ದಾರೆ. ಆದರೆ, ಶುಭಂ ಶೆಳಕೆ ಅವರು ಭಾಷಾ ಸಾಮರಸ್ಯ ಕದಡಲು ಯತ್ನಿಸುತ್ತಿದ್ದಾರೆ. ನಮ್ಮ ಹೋರಾಟವೇನಿದ್ದರೂ ಎಂಇಎಸ್ ವಿರುದ್ಧವೇ ಹೊರತು, ಬೆಳಗಾವಿಯಲ್ಲಿನ ಮರಾಠಿ ಭಾಷಿಕರ ವಿರುದ್ಧವಲ್ಲ’ ಎಂದು ಹೇಳಿದ್ದಾರೆ.
ಶುಭಂ ಶೆಳಕೆ ಸಾಮಾಜಿಕ ಕಿಡಿ ಇದ್ದಂತೆ. ಅವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂಥ ಹೇಳಿಕೆ ನೀಡುವ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕು. ಯಾವುದೋ ಮೂಲೆಯಲ್ಲಿ ಕುಳಿತು ನಾರಾಯಣಗೌಡರ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಆಗದು. ನಿಜವಾಗಿ ತಾಕತ್ತಿದ್ದರೆ ಬೆಳಗಾವಿಗೆ ಬನ್ನಿ ಎಂದು ಸವಾಲು ಹಾಕಿದ್ದಾರೆ.