*ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ವಿದ್ಯಾರ್ಥಿಗೆ ಶಿಕ್ಷೆ?*

*ಡಾ. ಸೋನಾಲಿ ಸರ್‌ನೋಬತ್
ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ – ಕರ್ನಾಟಕ ರಾಜ್ಯ ಕಾರ್ಯದರ್ಶಿ ಖಂಡನೆ*
ಪ್ರಗತಿವಾಹಿನಿ ಸುದ್ದಿ,
ಬೆಳಗಾವಿ :
ಭಾನುವಾರ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ ಕ್ಯಾಂಪ್ ಪ್ರದೇಶದ ಶಾಲೆಯೊಂದರ ಐದನೇ ತರಗತಿಯ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆ ಖಂಡನೀಯ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಶಾಲೆಯ ಶಿಕ್ಷಕಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು; ಇಲ್ಲದಿದ್ದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಸೋಮವಾರ ಶಾಲೆಯಲ್ಲಿ ಶಿಕ್ಷಕಿ ಆ ವಿದ್ಯಾರ್ಥಿಯ ಫೇಸ್ಬುಕ್ ವೀಡಿಯೊ ಮತ್ತು ಗಣವೇಶ ಧರಿಸಿರುವ ಚಿತ್ರವನ್ನು ಸಂಪೂರ್ಣ ತರಗತಿಗೆ ತೋರಿಸಿ, ಆ ವಿದ್ಯಾರ್ಥಿಯ ಅವಮಾನ ಮಾಡಿದ್ದಾರೆ. ಪುನಃ ಪುನಃ ತರಗತಿಯ ಹೊರಗೆ ನಿಲ್ಲಿಸುವ ಮೂಲಕ ಅವಮಾನಕಾರಿ ವರ್ತನೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಕುರಿತು ಆ ವಿದ್ಯಾರ್ಥಿ ಪೋಷಕರಿಗೆ ತಿಳಿಸಿದ್ದಾನೆ.
ಭಾನುವಾರ ಸಾರ್ವಜನಿಕ ರಜೆ ದಿನವಾಗಿರುವುದರಿಂದ ವಿದ್ಯಾರ್ಥಿ ಪಥಸಂಚಲನದಲ್ಲಿ ಭಾಗವಹಿಸುವುದು ಸಂಪೂರ್ಣ ವೈಯಕ್ತಿಕ ವಿಷಯ. ಆದರೆ ಶಿಕ್ಷಕಿ ಅದನ್ನು ರಾಜಕೀಯವಾಗಿ ತೆಗೆದುಕೊಂಡು ತರಗತಿಯಲ್ಲಿ ವಿದ್ಯಾರ್ಥಿಯ ಅವಮಾನ ಮಾಡಿದ್ದಾರೆ.
ಈ ಕೃತ್ಯದಿಂದ ಇತರ ವಿದ್ಯಾರ್ಥಿಗಳಲ್ಲಿಯೂ ಭಯದ ವಾತಾವರಣ ನಿರ್ಮಾಣವಾಗಿದೆ.
ಮುಂದಿನ ದಿನ ಮಂಗಳವಾರ ಆ ವಿದ್ಯಾರ್ಥಿ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರಿಂದ ಪೋಷಕರಿಗೂ ಸಂಕಟ ಉಂಟಾಗಿದೆ ಎಂದು ಸರ್ನೋಬತ್ ಹೇಳಿದ್ದಾರೆ.
ನಾನು ಈ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸುತ್ತೇನೆ. ಶಾಲಾ ಆಡಳಿತದಿಂದ ಸ್ಪಷ್ಟ ಉತ್ತರ ನೀಡಬೇಕು ಹಾಗೂ ಶಿಕ್ಷಕಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಾವು ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.