Belagavi NewsBelgaum NewsKarnataka NewsPolitics

*ಐ ಲವ್ ಭಾರತ್, ಐ ಲವ್ ಆರ್ ಎಸ್ ಎಸ್ ಅಭಿಯಾನಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ವತಿಯಿಂದ “ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್.ಎಸ್.ಎಸ್ ಪ್ರೀತಿಸುತ್ತಾರೆ” ಎಂಬ ಪೋಸ್ಟರ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 

ಬಿಜೆಪಿ ವತಿಯಿಂದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಾಳೇಕುಂದ್ರಿ ಕೆ.ಎಚ್  ಗ್ರಾಮದಲ್ಲಿ “ಯಾರು ಭಾರತವನ್ನು ಪ್ರೀತಿಸುತ್ತಾರೋ ಅವರು ಆರ್. ಎಸ್‍.ಎಸ್ ಪ್ರೀತಿಸುತ್ತಾರೆ” ಎಂಬ ಅಭಿಯಾನದ ಅಂಗವಾಗಿ ಈ ಪೋಸ್ಟರ್ ಬಿಡುಗಡೆ ಮಾಡಿ ಗ್ರಾಮದ ಮನೆ ಮನೆಗೆ ತೆರಳಿ ಗೋಡೆಗೆ ಪೋಸ್ಟರ್ ಅಂಟಿಸಲಾಯಿತು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಹಾಗೂ  ಮಾಜಿ ಶಾಸಕರಾದ ಸಂಜಯ್ ಪಾಟೀಲ್  ಅವರು, ಆರ್‍ಎಸ್‍ಎಸ್ ನಿಷೇಧ ಮಾಡುವ ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಬಾಲಿಷತನದಿಂದ ಕೂಡಿದೆ. ಈ ದೇಶದಲ್ಲಿ ಸ್ವತಂತ್ರವಾಗಿ ಮಾತನಾಡುವ, ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ನಡೆಸುವ, ಸಂಘ-ಸಂಸ್ಥೆ ಸ್ಥಾಪಿಸುವ ಅಧಿಕಾರವನ್ನು ಭಾರತೀಯ ಸಂವಿಧಾನ ಕರುಣಿಸಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಸಂಘವನ್ನು ನಿಷೇಧ ಮಾಡಿ ಎಂದು ಹೇಳುವ ಮೂಲಕ ಭಾರತೀಯ ಸಂವಿಧಾನ ನೀಡಿರುವ ಹಕ್ಕುಗಳನ್ನೇ ಕಸಿದುಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದಿರುವ ಪ್ರಿಯಾಂಕ್ ಅವರಿಗೆ ಜನರ ನೋವು ಗೊತ್ತಿಲ್ಲ. ಹೀಗಾಗಿಯೇ ಈ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಂಘ ಪರಿವಾರದ ಜನಪರ ಕಾರ್ಯವನ್ನು, ದೇಶಭಕ್ತಿಯ ಅದಮ್ಯ ಭಾವನೆಯನ್ನು ಅವರು ಮೊದಲು ತಿಳಿದುಕೊಳ್ಳಲಿ. ಈ ರೀತಿ ಒಂದು ಜನಪರ, ದೇಶಭಕ್ತಿಯ ಸಂಘಟನೆಯ ಮೇಲೆ ಆರೋಪ ಮಾಡಿರುವ ಪ್ರಿಯಾಂಕ್ ಖರ್ಗೆ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

Home add -Advt

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಯುವರಾಜ್ ಜಾಧವ್, ಮುಖಂಡರಾದ ಮುರುಘೇಂದ್ರಗೌಡ ಪಾಟೀಲ, ವಿಠ್ಠಲ ಕರಿಗಾರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Back to top button