
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೋರಣಕಿ, ಕರಿಕಟ್ಟಿ, ಘಸ್ಟೋಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿ, ಜನ ಬೇಸತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೋರ ಹಾಕುತಿದ್ದಾರೆ.
ಕೃಷಿ ಭೂಮಿಯ ಮೇಲೆ ದಾಳಿ ನಡೆಸುತ್ತಿರುವ ಕಾಡಾನೆಗಳು ಬೆಳೆಗಳನ್ನು ನಾಶಪಡಿಸುತ್ತಿದ್ದು, ಈ ಬೆಳವಣಿಗೆ ಖಾನಾಪುರದ ರೈತರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಕಾಡಾನೆ ದಾಳಿ ಕುರಿತು ಅರಣ್ಯಾಧಿಕಾರಿಗಳಿಗೆ ಪದೇ ಪದೇ ದೂರು ನೀಡಲಾಗುತ್ತಿದ್ದು, ಸಹಾಯಕ್ಕಾಗಿ ಮನವಿ ಮಾಡುತ್ತಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ರೈತರು ಆರೋಪಿಸಿದ್ದಾರೆ.
ತಿಂಗಳುಗಳ ಕಾಲ ಕಠಿಣ ಪರಿಶ್ರಮದಿಂದ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕಾಡಾನೆಗಳು ಕೆಲವೇ ನಿಮಿಷಗಳಲ್ಲಿ ನಾಶವಾಗುತ್ತಿವೆ. ಪ್ರತೀ ವರ್ಷ ಇದೇ ರೀತಿಯ ಪರಿಸ್ಥಿತಿ ಎದುರಾಗುತ್ತಿದೆ. ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುತ್ತಲೇ ಇದ್ದೇವೆ. ಪರಿಹಾರಕ್ಕಾಗಿ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಸ್ಕೆನಟ್ಟಿ ಗ್ರಾಮದ ರೈತರೊಬ್ಬರು ಹೇಳಿದ್ದಾರೆ.
ನಮ್ಮ ಜೀವನೋಪಾಯವು ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ.
ಇದೀಗ ಬೆಳೆ ನಾಶವು ನಮ್ಮನ್ನು ಸಾಲದ ಕೂಪಕ್ಕೆ ತಳ್ಳಿದೆ. ಪಟಾಕಿ ಸಿಡಿಸಿ, ಜೋರಾದ ಶಬ್ಧ ಮಾಡಿ ಆನೆಗಳ ಓಡಿಸಲು ಪ್ರಯತ್ನಿಸಲಾಗುತ್ತಿದೆ. ಕಟಾವಿಗೆ ಬಂದಿದ್ದ ಕಬ್ಬು, ಭತ್ತದ ಕಾಡಾಣೆಗಳ ಹಿಂಡು ನಾಶ ಮಾಡುತ್ತಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ಅರಣ್ಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಕಾಡಂಚಿನ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದೆ. ಕಾಡಿಗೆ ಓಡಿಸಬೇಕೆಂದು ಮನವಿ ಮಾಡಿದ್ರೂ ಅಧಿಕಾರಿಗಳ ಸ್ಪಂದಿಸುತ್ತಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೋರ ಹಾಕುತ್ತಿದ್ದಾರೆ.



