Latest

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಕಾರಗೊಳ್ಳಲಿ: ದೇಶಪಾಂಡೆ

     ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ದಶಕಗಳ ಕನಸಿನ ಯೋಜನೆಯಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಅರಣ್ಯ ಮತ್ತು ಪರಿಸರದ ಕಾರಣಗಳ ಹಿನ್ನೆಲೆಯಲ್ಲಿ ಕೈಬಿಡುವ ಇಂಗಿತವನ್ನು ವ್ಯಕ್ತಪಡಿಸಿರುವ ಕೇಂದ್ರ ಸರಕಾರದ ಧೋರಣೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ರೈಲು ಸಂಪರ್ಕ ಕಲ್ಪಿಸಬೇಕೆನ್ನುವುದು ಈ ಭಾಗದ ಜನತೆಯ ಹಲವು ದಶಕಗಳ ಹಂಬಲವಾಗಿದೆ. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಸಾಧಿಸಬೇಕಾದ ಅಗತ್ಯವಿದೆ. ಎರಡನ್ನೂ ಗಮನದಲ್ಲಿಟ್ಟುಕೊಂಡು, ಈ ಯೋಜನೆಯ ಸಾಕಾರಕ್ಕೆ ಸೂಕ್ತ ಮಾರ್ಗ ಹುಡುಕಬೇಕು’’ ಎಂದು ಒತ್ತಾಯಿಸಿದ್ದಾರೆ.
“ಈ ರೈಲು ಮಾರ್ಗ ಸಾಕಾರಗೊಂಡರೆ ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಈ ಭಾಗದ ವಾಣಿಜ್ಯ ವಹಿವಾಟು ಕೂಡ ಸುಗಮವಾಗಲಿದೆ. ಪರಿಸರ ಸಂರಕ್ಷಣೆಯ ಜೊತೆಯಲ್ಲೇ ಈ ಜರೂರನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕು,’’ ಎಂದು ದೇಶಪಾಂಡೆ ಹೇಳಿದ್ದಾರೆ.
“ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸಂಕೀರ್ಣವಾದ ಅಡೆತಡೆಗಳು ಎದುರಾಗುವುದು ಸಹಜ. ಹಾಗೆಂದು, ಯೋಜನೆಯನ್ನೇ ಏಕಾಏಕಿಯಾಗಿ ಕೈಬಿಡುವುದು ಅಸಮತೋಲನಕ್ಕೂ ಕಾರಣವಾಗಬಲ್ಲದು. ಹೀಗಾಗಿ, ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ಕಡೆಗೆ ಒತ್ತು ನೀಡಬೇಕಾಗಿದೆ,’’ ಎಂದು ಸಚಿವರು ಪ್ರತಿಪಾದಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button