*ಬೆಳಗಾವಿಯಲ್ಲಿ ಚಾಕು ಇರಿತ ಪ್ರಕರಣ: ವಿಚಾರಣೆ ತೀವ್ರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ನಡೆದ 70 ನೇ ಕರ್ನಾಟಕ ರಾಜ್ಯೋತ್ಸವದ ವೇಳೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಐವರಿಗೆ ಚಾಕು ಇರಿದಿದ್ದಾರೆ. ಘಟನೆ ಬಳಿಕ ಪೊಲೀಸ್ ಕಮಿಷನರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ ಬಳಿ ರಾಜ್ಯೋತ್ಸವ ಅಂಗವಾಗಿ ನಡೆಯುತ್ತಿರುವ ರೂಪಕಗಳ ಮೆರವಣಿಗೆ ವೇಳೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಯದ್ವತದ್ವಾ ಚಾಕು, ಜಂಬೆ ಸಮೇತ ಆಗಮಿಸಿ ಐವರ ಮೇಲೆ ದಾಳಿ ನಡೆಸಿ ಪಾರಾರಿಯಾದ್ದಾರೆ.
ಚಾಕು ಇರಿತಕ್ಕೆ ಒಳಗಾದ ಐವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಹಾಗೂ ನಜೀರ್ ಪಠಾಣ್ ಎಂಬಾತರಿಗೆ ಚಾಕು ಇರಿತ ಮಾಡಲಾಗಿದೆ.
ಇನ್ನು, ಘಟನೆಯ ವಿಷಯ ತಿಳಿದ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಗಾಯಾಳುಗಳು ಅಡ್ಮಿಟ್ ಆದ ವಾರ್ಡ್ ಗೆ ಭೇಟಿ ನೀಡಿದರು. ಚಾಕು ಇರಿತಕ್ಕೊಳಗಾದವರಿಂದ ಮಾಹಿತಿ ಪಡೆದರು.
ಗಾಯಾಳುಗಳ ಭೇಟಿ ಬಳಿಕ ಪೊಲೀಸ್ ಕಮಿಷನರ್ ಭೂಷಣ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ವೈ ಜಂಕ್ಷನ್ ಬಳಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಘರ್ಷಣೆ ಆಗಿದೆ. ನಾಲ್ಕು ಜನರಿಗೆ ಚಾಕು ಇರಿತ ಆಗಿದೆ, ಒಬ್ಬರಿಗೆ ತಲೆಗೆ ಗಾಯ ಆಗಿದೆ. ಎಲ್ಲ ಐದು ಜನರು ಔಟ್ ಆಫ್ ಡೇಂಜರ್ ಇದ್ದಾರೆ. ಯಾರು ಹಲ್ಲೆ ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಮಾಹಿತಿ ಪಡೆಯುತ್ತಿದ್ದೇವೆ. ಘಟನೆಯಾದ ಜಾಗದಲ್ಲಿ ಸಿಸಿಟಿವಿ ಪರಿಶೀಲನೆ ಕೂಡ ಮಾಡುತ್ತೇವೆ. ಗಾಯಗೊಂಡ ಎಲ್ಲರೂ ನೆಹರು ನಗರದ ನಿವಾಸಿಗಳು ಎಂದರು.




