Belagavi NewsBelgaum NewsKannada NewsKarnataka NewsLatest

*ಪುನರ್ವಿಂಗಡಣೆ ನಂತರ ಬೆಳಗಾವಿ ಜಿಲ್ಲೆಯಲ್ಲಿ 24 ವಿಧಾನಸಭಾ ಕ್ಷೇತ್ರ?* *2028ರ ಚುನಾವಣೆಗೆ 8 ಕ್ಷೇತ್ರ ಮಹಿಳೆಯರಿಗೆ!*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಬಲ ಎಂದೇ ಗುರುತಿಸಲ್ಪಟ್ಟಿರುವ ಬೆಳಗಾವಿ ಜಿಲ್ಲೆ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಲಿದ್ದು, 2028ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ದೊಡ್ಡಮಟ್ಟದ ಬದಲಾವಣೆ ಕಾಣುವ ಸೂಚನೆ ಸಿಕ್ಕಿದೆ.

ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯ ಅಂತಿಮ ಹಂತದಲ್ಲಿರುವುದರಿಂದ, ಈಗಾಗಲೆ 18 ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆ ಮುಂದಿನ ಚುನಾವಣೆ ವೇಳೆ ಇನ್ನೂ 6 ಕ್ಷೇತ್ರಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಕರ್ನಾಟಕದ ರಾಜಕಾರಣದಲ್ಲಿ ಬೆಳಗಾವಿ ಜಿಲ್ಲೆಗೆ ದೊಡ್ಡ ಹೆಸರಿದೆ. ಕ್ಷೇತ್ರಗಳ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಜಿಲ್ಲೆಯ ರಾಜಕಾರಣಿಗಳ ತಾಕತ್ತಿನ ಕಾರಣದಿಂದಲೂ ಜಿಲ್ಲೆ ಪ್ರಬಲವಾಗಿದೆ. ಒಮ್ಮೆ ಜಿದ್ದಿಗೆ ಬಿದ್ದರೆಂದರೆ ಯಾವ ಹಂತಕ್ಕೂ ಹೋಗುವ ಛಾತಿ ಜಿಲ್ಲೆಯ ರಾಜಕಾರಣಿಗಳದ್ದು. ಇದು ಈಗಾಗಲೆ ಹಲವು ಬಾರಿ ಸಾಬೀತಾಗಿರುವುದರಿಂದ ಯಾವ ಪಕ್ಷವೂ ಜಿಲ್ಲೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ.

ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 24ಕ್ಕೆ ಏರಿಕೆಯಾಗಲಿದೆ. 6 ಕ್ಷೇತ್ರಗಳ ಹೆಚ್ಚಳ ಜಿಲ್ಲೆಯ ರಾಜಕಾರಣದಲ್ಲಿ ಬಹಳ ದೊಡ್ಡ ಮಟ್ಟದ ಬದಲಾವಣೆ ತರುವುದು ಖಚಿತ.

Home add -Advt

ಇದರ ಜೊತೆಗೆ ಮಹಿಳಾ ಮೀಸಲಾತಿ ಮುಂದಿನ ಚುನಾವಣೆಯಲ್ಲೇ ಜಾರಿಯಾಗುವುದರಿಂದ ಮಹಿಳೆಯರಿಗೆ 8 ಸ್ಥಾನಗಳು ಸಿಗಲಿವೆ. ಸಧ್ಯಕ್ಕೆ ಬೆಳಗಾವಿ ಗ್ರಾಮೀಣ ಮತ್ತು ನಿಪ್ಪಾಣಿ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರದಲ್ಲಿ ಮಹಿಳೆಯರಿಲ್ಲ. ಇನ್ನೂ 6 ಕ್ಷೇತ್ರಗಳಿಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಲಿದ್ದು, ಹೊಸಮುಖಗಳಿಗೆ ಅವಕಾಶ ಸಿಗಲಿದೆ.

6 ಹೊಸ ಕ್ಷೇತ್ರಗಳು ನಿರ್ಮಾಣವಾದಲ್ಲಿ ಈಗ ಇರುವ ಎಲ್ಲ 18 ಕ್ಷೇತ್ರಗಳ ವ್ಯಾಪ್ತಿಯಲ್ಲೂ ಸಾಕಷ್ಟು ಬದಲಾವಣೆಗಳಾಗಲಿವೆ. ಹಾಲಿ ಶಾಸಕರು ಸಹ ಅನೇಕ ಹಳೆಯ ಮತದಾರರನ್ನು ಕಳೆದುಕೊಂಡು, ಹೊಸ ಮತದಾರರನ್ನು ಎದುರಿಸಬೇಕಾಗಬಹುದು. ಜೊತೆಗೆ ಮಹಿಳಾ ಮೀಸಲಾತಿಯಿಂದಾಗಿ ಕೆಲವರು ಕ್ಷೇತ್ರವನ್ನೇ ಕಳೆದುಕೊಳ್ಳಬೇಕಾಗಬಹುದು.

ಈ ಬೆಳವಣಿಗೆಗಳು ಜಿಲ್ಲೆಯಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಲಿದೆ. ಇದು ಜಿಲ್ಲೆಗೆ ಮಾತ್ರ ಸೀಮಿತವಾಗದೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲೂ ಕ್ಷೇತ್ರಗಳ ಸಂಖ್ಯೆಯಲ್ಲಿ ಬದಲಾವಣೆಯಾಗಲಿದೆ. ಹಾಗೆಯೇ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ವಿಧಾನಸಭೆ ಪ್ರವೇಶಿಸಲಿದ್ದಾರೆ. ಮಹಿಳಾ ನಾಯಕತ್ವಕ್ಕೆ ಮುಂದಿನ ಚುನಾವಣೆ ಅವಕಾಶ ಮತ್ತು ಸವಾಲಿನ ಸಂದರ್ಭವಾಗುವ ಸಾಧ್ಯತೆ ಇದೆ.

ಒಟ್ಟಾರೆ ಬೆಳಗಾವಿ ಜಿಲ್ಲೆ 24 ಕ್ಷೇತ್ರಗಳೊಂದಿಗೆ 2028ರಲ್ಲಿ ದೊಡ್ಡಮಟ್ಟದ ಸದ್ದು ಮಾಡುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಇನ್ನು ಕೆಲವೇ ತಿಂಗಳಲ್ಲಿ ಈಬಗ್ಗೆ ಸ್ಪಷ್ಟತೆ ಸಿಗಬಹುದು.

Related Articles

Back to top button