ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ಕುವೆಂಪು ಅವರು ಮೂಢನಂಬಿಕೆ ವಿರೋಧಿ ಸಾಹಿತ್ಯ ಕೃಷಿ ಮೂಲಕ ಇಡೀ ಜಗತ್ತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಯ.ರು. ಪಾಟೀಲ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸ್ಥಳೀಯ ಭಾಷೆ ಉಳಿದು ಬೆಳೆಯ ಬೇಕಾದರೆ. ಯುವ ಸಮುದಾಯದವರು ಹೆಚ್ಚು ಹೆಚ್ಚಾಗಿ ಸ್ಥಳೀಯ ಭಾಷೆಯನ್ನು ಬಳಸಬೇಕು. ಯುವಕರು ಕನ್ನಡ ಭಾಷೆ ಬಳಸುವ ಮೂಲಕ ಕನ್ನಡ ಭಾಷೆಯ ಸಂರಕ್ಷಣೆಗೆ ವಾರಸುದಾರರಾಗಬೇಕು ಎಂದು ಕರೆ ನೀಡಿದರು.
ಬೆಳಗಾವಿಯ ಆರ್.ಪಿ.ಡಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್.ಬಿ. ಕೋಲಕಾರ ಉಪನ್ಯಾಸ ನೀಡಿ, ಕುವೆಂಪು ಅವರು 20ನೇ ಶತಮಾನದ ಶ್ರೇಷ್ಠ ಸಾಹಿತಿಯಾಗಿದ್ದಾರೆ. ಮಹಾನ್ ದಾರ್ಶನಿಕ ಹಾಗೂ ವೈಚಾರಿಕ ಕವಿಯಾಗಿದ್ದಾರೆ ಎಂದು ಹೇಳಿದರು.
ಪುಟ್ಟಪ್ಪನವರಿಗೆ ಕುವೆಂಪು ಕಾವ್ಯನಾಮಕ್ಕಿಂತ ಮೊದಲು ಕಿಶೋರ ಮತ್ತು ಚಂದ್ರವಾಣಿ ಎಂಬ ಕಾವ್ಯನಾಮಗಳು ಇದ್ದವು. ಸಂಕಲನ ಕೃತಿ ಪ್ರಕಟವಾದ ನಂತರ ಅವರು ಕುವೆಂಪು ಕಾವ್ಯನಾಮದಿಂದ ಕೃತಿಗಳನ್ನು ಬರೆಯಲು ಆರಂಭಿಸಿದರು ಎಂದು ತಿಳಿಸಿದರು.
ಅಥಣಿಯ ಮಹೇಶ್ವರ ಕಾಂಬಳೆ ಅವರು ಕುವೆಂಪು ಅವರ ಕವನಗಳನ್ನು ಗಾಯನದ ರೂಪದಲ್ಲಿ ಪ್ರಸ್ತುತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ, ಸಾಹಿತಿ ಮೋಹನ ಗುಂಡ್ಲೂರ, ಉಪನ್ಯಾಸಕರಾದ ಪ್ರಕಾಶ ಕಮತಿ, ಶ್ರೀದೇವಿ ಗುಮ್ಮನಗೋಳ, ಸ್ನೇಹಲ್ ಕಿಲ್ಲೇಕರ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ