*ಏಳನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಇಂದು ಹಲವೆಡೆ ಬಂದ್, ರಸ್ತೆ ತಡೆದು ಹೋರಾಟ*

ಪ್ರಗತಿವಾಹಿನಿ ಸುದ್ದಿ: ಕಬ್ಬು ಹಂಗಾಮು ಆರಂಭಿಸುವ ಮುನ್ನವೇ ಪ್ರತಿ ಟನ್ ಕಬ್ಬಿಗೆ 3,500 ರೂ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಏಳನೆ ದಿನಕ್ಕೆ ಕಾಲಿಟ್ಟಿದೆ.
ಹೋರಾಟದ ಅಂಗವಾಗಿ ಬೆಳಗಾವಿ ಜಿಲ್ಲೆಯ ಅಥಣಿ ಹಾಗೂ ಹುಕ್ಕೇರಿ ಪಟ್ಟಣಗಳಲ್ಲಿ ಮಂಗಳವಾರ ಬಂದ್ ಆಚರಿಸಲಾಯಿತು. ಇಂದು ಕೂಡಾ ಅನೇಕ ಕಡೆ ಬಂದ್ ಮುಂದುವರೆಯಲಿದೆ. ಅನೇಕ ಸಂಘಟನೆಗಳು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ.
ಬಿಜೆಪಿ ನಾಯಕರ ಸಾಥ್
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಳಗಾವಿ ಜಿಲ್ಲೆ ಗುರ್ಲಾಪುರ ಕ್ರಾಸ್‌ಗೆ ಆಗಮಿಸಿ, ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಅವರ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾತ್ರಿ ಕೂಡಾ ಪ್ರತಿಭಟನಾ ಸ್ಥಳದಲ್ಲೆ ಮಲಗಿದ್ದರು.
ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಚಿಕ್ಕೋಡಿ, ಅಥಣಿ, ಬೈಲಹೊಂಗಲ, ರಾಯಬಾಗ ಸೇರಿ ಜಿಲ್ಲೆಯಾದ್ಯಂತ ಮಂಗಳವಾರ ರೈತರ ಪ್ರತಿಭಟನೆಗಳು ನಡೆದವು. ಪ್ರಗತಿಪರ ಸಂಘಟನೆಗಳು, ವಕೀಲರ ಸಂಘ, ಕರವೇ ಸೇರಿ ಹಲವು ಸಂಘ-ಸಂಸ್ಥೆಗಳು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದವು.

ರೈತರ ಜೊತೆ ಎಚ್ ಕೆ ಪಾಟೀಲ್ ಮಾತುಕತೆ
ಸರ್ಕಾರದ ಪ್ರತಿನಿಧಿಯಾಗಿ ಸಚಿವ ಎಚ್ ಕೆ ಪಾಟೀಲ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇದ್ದು, ರೈತರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.




