*ಉಸ್ತುವಾರಿ ಸಚಿವರು ಹತ್ತಿರ ಇದ್ದರೂ ರೈತರನ್ನು ಮಾತನಾಡಿಸಿಲ್ಲ: ವಿಜಯೇಂದ್ರ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತ ಲಕ್ಕಪ್ಪ ಹೆಚ್ಚಿನ ಪ್ರಮಾಣದಲ್ಲಿ ವಿಷ ಸೇವಿಸಿದ್ದರಿಂದ ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ. ಹಾರ್ಟ್ ಮತ್ತು ಲಂಗ್ಸ್ ಗೆ ಪರಿಣಾಮ ಬೀರಿದೆ. ವೈದ್ಯರು ಎರಡ್ಮೂರು ದಿನ ಕಾದು ನೋಡೊಣ ಎಂದು ಹೇಳಿದ್ದಾರೆ. ಭಗವಂತನ ಕೃಪೆಯಿಂದ ಆರೋಗ್ಯ ಸರಿ ಆಗುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳಬೇಕು ಎಂದು ಬಿ ವೈ ವಿಜಯೇಂದ್ರ ಒತ್ತಾಯಿಸಿದರು.
ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ರೈತನ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ‘ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿಲ್ಲ. ಉಸ್ತುವಾರಿ ಸಚಿವರು ಹತ್ತಿರ ಇದ್ದರೂ ಬಂದು ರೈತರನ್ನು ಮಾತನಾಡಿಸಿಲ್ಲ. ಕಬ್ಬು ಬೆಳೆಗಾರರನ್ನು ಸರ್ಕಾರ ಹಗುರವಾಗಿ ತೆಗದುಕೊಂಡಿದೆ. ರೈತರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಲಕ್ಕಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂಥ ಸಂದರ್ಭದಲ್ಲಿ ಯಾರೊಬ್ಬರು ಬಂದು ಕುಟುಂಬಸ್ಥರನ್ನು ಭೇಟಿಯಾಗಿಲ್ಲ. ರಾಜ್ಯ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಕನಿಷ್ಟ ಪಕ್ಷ ಆತ್ಮಹತ್ಯೆಗೆ ರೈತರನ್ನು ಭೇಟಿಯಾಗುವ ಕಾಮನ ಸೆನ್ಸ್ ಇವರಿಗಿಲ್ಲ ಎಂದು ಕಿಡಿಕಾರಿದರು.
ಅಧಿಕಾರದ ಮದ ಈ ರೀತಿ ಮಾಡಿಸುತ್ತಿದೆ. ಇಷ್ಟು ಕೆಟ್ಟದಾಗಿ ಯಾವ ರಾಜ್ಯ ಸರ್ಕಾರಗಳು ರೈತರನ್ನು ನಡೆಸಿಕೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಮನವಿ ಮಾಡುತ್ತೇನೆ. ಈಗಲಾದ್ರೂ ಎಚ್ಚೆತ್ತುಕೊಂಡು ಕಬ್ಬು ಬೆಳೆಗಾರ ಸಮಸ್ಯೆಯ ಬಗ್ಗೆ ಸ್ಪಂದಿಸಬೇಕು. ಸರ್ಕಾರ ಕಣ್ಣಿದ್ದು ಕುರುಡುನಂತೆ, ಕಿವಿಯಿದ್ದು ಕಿವುಡನಂತೆ ವರ್ತನೆ ಮಾಡುತ್ತಿದೆ ಎಂದು ಹರಿಹಾಯ್ದರು.
ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ರೈತರಿಗೆ ಧೈರ್ಯ ತುಂಬಿ ಬಂದಿದ್ದೇನೆ. ಮಾಧ್ಯಮಗಳು ಇಡೀ ರಾಜ್ಯಕ್ಕೆ ರೈತರ ಹೋರಾಟ ತಿಳಿಯುವಂತೆ ಮಾಡಿದ್ದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರ ಕೆಟ್ಟದಾಗಿ ವರ್ತಿಸುತ್ತಿದೆ. ನಾವೆಲ್ಲ ಹೋರಾಟದಲ್ಲಿ ಭಾಗವಹಿಸಿದ ಪರಿಣಾಮ ಸಚಿವ ಎಚ್ ಕೆ ಪಾಟೀಲ್ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಇವತ್ತು ಮಾತುಕತೆ ನಡೆಯಲಿದೆ.
ರೈತರು ಯಾವುದೇ ನಿರ್ಧಾರ ಕೈಗೊಂಡರೂ ನಾನು ಅವರ ಜೊತೆಗೆ ಇರುತ್ತೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಬಿಜೆಪಿ, ಕಾಂಗ್ರೆಸ್ ನಾಯಕರ ಕಾರ್ಖಾನೆಗಳು ಇವೆ. ಬಿಜೆಪಿ ನಾಯಕರ ಕಾರ್ಖಾನೆ ಇದೆ ಎಂದು ನಾವು ಹೋರಾಟದಿಂದ ಹಿಂದೆ ಸರಿದಿಲ್ಲ. ಪ್ರಾಮಾಣಿಕವಾಗಿ ಮತ್ತು ಕಳಕಳಿಯಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ಅದು ರೈತರಿಗೆ ಮನವರಿಕೆ ಆಗಿದೆ.ಮುಂದಿನದಿನಗಳಲ್ಲಿಯಾವ ರೀತಿ ಸಹಕಾರ ಮಾಡಬೇಕೋ ಮಾಡುತ್ತೇನೆ ಎಂದರು.
ಕಬ್ಬಿನ ಉಪ ಉತ್ಪನ್ನದ ಲಾಭಾಂಶ ಕಬ್ಬು ಪೂರೈಸಿದ ರೈತರಿಗೆ ಹಂಚಿಕೆ ಮಾಡುವ ಸಂಬಂಧ ರೈತರು ಮನವಿ ಮಾಡಿಕೊಂಡಿದ್ದಾರೆ. ಕೂಲಂಕುಷವಾಗಿ ಚರ್ಚಿಸಿ ಎಲ್ಲಿ ಮಾತಾಡಬೇಕೊ ಅಲ್ಲಿ ಮಾತಾಡುತ್ತೇನೆ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದರು.
ಈ ವೇಳೆ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಎಂ.ಬಿ.ಜೀರಲಿ, ಮಲ್ಲಣ್ಣ ಯಾದವಾಡ, ಮುರುಘೇಂದ್ರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಸೇರಿ ಮತ್ತಿತರರು ಇದ್ದರು.



