ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇಸ್ರೋ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲವಾದ ಬೆನ್ನಲ್ಲೇ ಇದೀಗ ಮತ್ತೊಂದು ಚಂದ್ರಯಾನಕ್ಕೆ ಇಸ್ರೋ ಸಜ್ಜಾಗಿದೆ. ಅಷ್ಟೇ ಅಲ್ಲ. ಈ ಬಾರಿ ಚಂದ್ರಯಾನದ ಜತೆಗೆ ಮೊಟ್ಟ ಮೊದಲ ಮಾನವ ಸಹಿತ ಗಗನಯಾನಕ್ಕೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಿದ್ಧತೆ ನಡೆಸಿರುವುದು ವಿಶೇಷ.
ಈ ಕುರಿತು ಇಸ್ರೋ ಅಧ್ಯಕ್ಷ ಕೆ.ಶಿವನ್ ವಿವರಿಸಿದ್ದು, ಚಂದ್ರಯಾನ-3 ಈ ವರ್ಷವೇ ಉಡಾವಣೆ ನಡೆಸಬೇಕೆಂಬ ಗುರಿ ಹೊಂದಲಾಗಿದ್ದು, ಚಂದ್ರಯಾನ- 2ರಲ್ಲಿನ ಲ್ಯಾಂಡರ್ ಹಾಗೂ ರೋವರನ್ನು ಚಂದ್ರಯಾನ-3 ರಲ್ಲಿಯೂ ಬಳಕೆ ಮಾಡುತ್ತೇವೆ. ಚಂದ್ರಯಾನ-3 ಯೋಜನೆಗೆ ಬರೋಬ್ಬರಿ 615 ಕೋಟಿ ರೂಪಾಯಿ ಖರ್ಚಾಗಲಿದೆ. ಸರಕಾರ ಯೋಜನೆಗೆ ಒಪ್ಪಿಗೆ ನೀಡಿದ್ದು, ನಾವು ಯೋಜನೆಯ ತಂಡವನ್ನು ರಚಿಸಿದ್ದೇವೆ ಎಂದು ವಿವರಿಸಿದರು.
ಚಂದ್ರಯಾನ-2 ಯೋಜನೆ ಬಗ್ಗೆ ಪ್ರಸ್ತಾಪಿಸಿದ ಶಿವನ್, ಆ ಯೋಜನೆಯನ್ನು ನಾವು ಚೆನ್ನಾಗಿ ಪೂರ್ಣಗೊಳಿಸಿದ್ದೆವು. ಆದರೆ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಂಡು ಬಂದಿತ್ತು. ನ್ಯಾವಿಗೇಷನ್ ಕಂಟ್ರೋಲ್ ಸಿಸ್ಟಂನಲ್ಲಿ ದೋಷ ಕಾಣಿಸಿತ್ತು. ಸಾಫ್ಟ್ ಲ್ಯಾಂಡಿಂಗ್ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ. ನಾವು ಸದ್ಯದಲ್ಲೇ ಇಂಟರ್‌ನೆಟ್ ಮೊಬೈಲ್ ಜಿಪಿಎಸ್ ಮಾಡುತ್ತೇವೆ. ಈ ರೋವರ್ ಹಾಗೂ ಲ್ಯಾಂಡರ್ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಬಹುದಾಗಿದೆ. ಇದನ್ನು ಚಂದ್ರಯಾನ-3ನಲ್ಲಿ ಬಳಸಿಕೊಳ್ಳಲಾಗುವುದು ಎಂದರು.
ಇನ್ನು ಇದೇ ವರ್ಷ ಮೊದಲ ಮಾನವಸಹಿತ ಗಗನಯಾನ ಯೋಜನೆಯನ್ನು ಕೂಡ ಹಮ್ಮಿಕೊಂಡಿದ್ದು, ನಾಲ್ಕು ಗಗನಯಾತ್ರಿಕರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ. 6 ಸಂಶೋಧನಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಜನವರಿ 26ರಂದು ಗಗನಯಾನ ಮಿಷನ್ ಆರಂಭವಾಗಲಿದ್ದು, ರಷ್ಯಾದಲ್ಲಿ ಗಗನ ಯಾತ್ರಿಗಳಿಗೆ ತರಬೇತಿ ಆರಂಭವಾಗಲಿದೆ. ಐಎಎಫ್ನಿಂದ 4 ಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಅಲ್ಲದೇ ಈ ವರ್ಷ ನಾವು 25ಕ್ಕೂ ಹೆಚ್ಚು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಗಗನಯಾನ, ಆದಿತ್ಯ ಮಿಷನ್, ಸೇರಿದಂತೆ ಹಲವು ಯೋಜನೆಗಳಿದ್ದು, ವರ್ಷದ ಕೊನೆಯಲ್ಲಿ ಮಾನವ ಸಹಿತ ಮಿಷನ್ ಉಡಾವಣೆ ಮಾಡುತ್ತೇವೆ. ತೂತುಕುಡಿಯಲ್ಲಿ ಇದರ ಕಾರ್ಯ ಆರಂಭವಾಗಿದೆ ಎಂದು ವಿವರಿಸಿದರು.
ಚಂದ್ರಯಾನ-3,ಗಗನಯಾನ,ಇಸ್ರೋ,
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ