Kannada NewsKarnataka NewsLatestPolitics

*ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣ: NIA ತನಿಖೆಗೆ ಆರ್‌.ಅಶೋಕ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಭಯೋತ್ಪಾದಕ ಮೊಬೈಲ್‌ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವದೆಹಲಿಯಲ್ಲಿ ನಡೆದ ಘಟನೆ ಭಯೋತ್ಪಾದನಾ ಕೃತ್ಯ ಎಂಬ ಅನುಮಾನವಿದೆ. ಇದೇ ಸಮಯದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಬ್ಬ ಭಯೋತ್ಪಾದಕ ಮೊಬೈಲ್‌ ಬಳಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ಡಾಕ್ಟರ್‌ಗಳು ಸೇರಿದಂತೆ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್‌ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ. ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ. ಪರಪ್ಪನ ಅಗ್ರಹಾರದಲ್ಲೂ ಕಾಂಗ್ರೆಸ್‌ನ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್‌ ಬಳಸುವಂತಾಗಿದೆ. ಇಂತಹ ವಿಫಲತೆಯನ್ನು ಒಪ್ಪಿಕೊಂಡು ಕಾಂಗ್ರೆಸ್‌ ನಾಯಕರು ರಾಜೀನಾಮೆ ನೀಡಬೇಕು ಎಂದರು.

Home add -Advt

ಇದು ಮನಮೋಹನ್‌ ಸಿಂಗ್‌ ಸರ್ಕಾರವಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಘಟನೆಯ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಲಿದೆ. ಕಾಂಗ್ರೆಸ್‌ ಇದ್ದಾಗ ನಕ್ಸಲ್‌ ಚಟುವಟಿಕೆ ಅಧಿಕವಾಗಿತ್ತು. ಅದನ್ನು ಗೃಹ ಸಚಿವ ಅಮಿತ್‌ ಶಾ ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿ ಭಯೋತ್ಪಾದನೆ ಕೂಡ ನಿರ್ಮೂಲನೆಯಾಗಲಿದೆ ಎಂದರು.

ರಾಜ್ಯ ಸರ್ಕಾರ ಕೇವಲ ಸುತ್ತೋಲೆ ಹೊರಡಿಸಿದರೆ ಸಾಲದು. ಗೃಹಸಚಿವರು ಹಾಗೂ ಪೊಲೀಸರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜನರಲ್ಲಿ ವಿಶ್ವಾಸ ತುಂಬಬೇಕು. ಸಾಧ್ಯವಾದಷ್ಟು ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್‌ ಮೇಲೆ ಜನರಿಗೆ ನಂಬಿಕೆ ಇಲ್ಲ. ಪಾಕಿಸ್ತಾನವನ್ನು ಕಾಂಗ್ರೆಸ್‌ ಪ್ರೀತಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಐಸಿಯುನಲ್ಲಿದೆ. ಯಾರು ಮುಖ್ಯಮಂತ್ರಿ ಎಂಬುದೇ ತಿಳಿದಿಲ್ಲ. ಶಾಸಕರಿಗೂ ಏನೂ ತಿಳಿಯುತ್ತಿಲ್ಲ. ಹೈಕಮಾಂಡ್‌ಗೆ ಇಕ್ಕಟ್ಟಿನ ಸ್ಥಿತಿ ಉಂಟಾಗಿದೆ. ಬಿಜೆಪಿಯಿಂದ ಜಿಬಿಎ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆದರೀಗ ವಿಧಾನಸಭಾ ಚುನಾವಣೆ ನಡೆಯುವ ಸ್ಥಿತಿ ಬಂದಿದೆ. ಯಾವ ಚುನಾವಣೆ ಮೊದಲು ಬರಲಿದೆ ಎಂದು ಗೊತ್ತಾಗುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇಬ್ಬರೂ ರೆಬಲ್‌ ಆಗಿದ್ದಾರೆ. ಬಿಜೆಪಿಯಿಂದ ಪಕ್ಷಾಂತರ ಮಾಡುವ ಸನ್ನಿವೇಶವೇ ಇಲ್ಲ. ನಾವೆಲ್ಲರೂ ಚುನಾವಣೆಯನ್ನು ಬಯುಸುತ್ತೇವೆ ಎಂದರು.

Related Articles

Back to top button