
ಬಿಡುಗಡೆಯಾಗದ ಬಿಸಿಯೂಟ ಅನುದಾನ; ಹಸಿವು ನೀಗಿಸೋ ಸಿಎಂ ಬದ್ಧತೆಗೇನಾಯಿತು?
ಪ್ರಗತಿವಾಹಿನಿ ಸುದ್ದಿ: ʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಡ ಜನರ ಹಸಿವು ನೀಗಿಸುವ ನಿಮ್ಮ ಬದ್ಧತೆ ಎಲ್ಲಿ ಹೋಯಿತು?ʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ರಾಜ್ಯದ ಪ್ರಾಥಮಿಕ-ಪ್ರೌಢಶಾಲೆಗಳಿಗೆ ಬಿಸಿಯೂಟ ಅನುದಾನ ಬಿಡುಗಡೆ ಮಾಡದೆ ಹಾಗೂ ಬಿಸಿಯೂಟ ತಯಾರಕರಿಗೆ ಸಕಾಲಿಕ ವೇತನ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಈ ಸರ್ಕಾರ ಶಾಲಾ ಮಕ್ಕಳ ಹೊಟ್ಟೆ ಮೇಲೂ ತಣ್ಣೀರು ಬಟ್ಟೆ ಹಾಕುತ್ತಿದೆ ಎಂದು ಹರಿ ಹಾಯ್ದಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಸಿಕ್ಕಾಗಲೆಲ್ಲ ಬಡ ಜನರ ಹಸಿವು ನೀಗಿಸುವ ಕುರಿತೇ ಮಾತೆತ್ತುತ್ತಾರೆ. ಆದರೆ, ಶಾಲೆಗಳಲ್ಲಿ ಎಳೆ ಮಕ್ಕಳ ಬಿಸಿಯೂಟಕ್ಕೇ ಕುತ್ತು ತಂದಿದ್ದಾರೆ. ಇದೆಂಥಾ ನೀತಿ ಎಂದು ಟೀಕಿಸಿರುವ ಜೋಶಿ, ಇದೇನಾ ಇವರ ಹಸಿವು ನೀಗಿಸುವ ಬದ್ಧತೆ? ಕಿಡಿ ಕಾರಿದ್ದಾರೆ.
ಸಿಎಂ ಗಟ್ಟಿ ಧ್ವನಿಗೇನಾಯಿತು?: ಮುಖ್ಯಮಂತ್ರಿಗಳು ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ “ಹ..ತ್ತು ಕೆಜಿ ಅಕ್ಕಿ ಬೇಕಾ.. ಬೇಡ್ವಾ.?” ಎಂದು ಗಟ್ಟಿ ಧ್ವನಿಯಲ್ಲೇ ಕೇಳುತ್ತಿದ್ದರು. ಆದರೆ, ಪ್ರಾಥಮಿಕ-ಪ್ರೌಢಶಾಲೆಗಳಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸಿಗದೆ ಹಸಿವಿನಲ್ಲಿದ್ದಾರೆ. ಹಾಗಿದ್ದರೂ ಸಿಎಂ ಮೌನ ವಹಿಸಿದ್ದಾರೆ. ಸಿಎಂ ಕುರ್ಚಿ ಗುದ್ದಾಟದಲ್ಲಿ ಸಿಎಂ ಗಟ್ಟಿ ಧ್ವನಿ ಉಡುಗಿದೆಯೇ? ಎಂದಿದ್ದಾರೆ ಸಚಿವ ಪ್ರಲ್ಹಾದ ಜೋಶಿ.
ಬಿಸಿಯೂಟಕ್ಕೂ ಕುತ್ತು ತರುವಷ್ಟು ಖಜಾನೆ ಬರಿದು: ಯಾವತ್ತೂ ಅನ್ನಭಾಗ್ಯವನ್ನೇ ಕನವರಿಸುತ್ತಿದ್ದ ಸಿಎಂ ಒಮ್ಮೆಯಾದರೂ ಶಾಲಾ ಮಕ್ಕಳ ಬಿಸಿಯೂಟದ ಬಗ್ಗೆ ಕಾಳಜಿ ತೋರಿದ್ದಿದೆಯೇ? ಬಿಸಿಯೂಟ ಅನುದಾನ ಒದಗಿಸುವ ಬಗ್ಗೆ ಗಮನ ಹರಿಸದಿರುವುದು ಮಕ್ಕಳ ದೌರ್ಭಾಗ್ಯವೇ ಸರಿ ಎಂದು ಖಂಡಿಸಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಕೇಂದ್ರ ಸರ್ಕಾರದ ಅನುದಾನ ಮತ್ತು ಇತರೆ ಮೂಲಗಳಿಂದ ಬಿಸಿಯೂಟ ನಿರ್ವಹಿಸಿಕೊಂಡು ಬರಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಕ್ಕಳ ಬಿಸಿಯೂಟಕ್ಕೂ ಕುತ್ತು ತರುವಷ್ಟು ಖಜಾನೆ ಬರಿದು ಮಾಡಿರುವುದು ರಾಜ್ಯದ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿದ್ಯುತ್ ಕಂಪನಿಗಳಿಗೂ ಬಾಕಿ: ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು ದಿವಾಳಿತನದತ್ತ ಸಾಗಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಕಂಪನಿಗಳನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ವಿದ್ಯುತ್ ಕಂಪನಿಗಳಿಗೆ ಸಾವಿರಾರು ಕೋಟಿ ರೂಪಾಯಿ ಬಾಕಿ ಪಾವತಿಸದೆ, ಜನರ ಮೇಲೆ ಹೊರೆ ಹಾಕಿ, ದೈನಂದಿನ ಜೀವನ ದುಸ್ಥರಗೊಳಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಮನಸೋ ಇಚ್ಛೆ ಆಡಳಿತ ನಡೆಸುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ ಎಂದು ಸಚಿವ ಜೋಶಿ ಖಂಡಿಸಿದ್ದಾರೆ.


