
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೋದಯ ಕಾಲೋನಿಯ ಯುದ್ಧ ಸ್ಮಾರಕ ಗಾರ್ಡನ್ ಹತ್ತಿರ ಸರಗಳ್ಳತನ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ದೀಪಕ ರಾವುತ,(22), ನಾಗರಾಜ ಬಸಪ್ಪ ಹರಣಿಶಿಕಾರಿ (19) ಎಂಬ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದಾಗ ಆರೋಪಿಗಳು ಎಪಿಎಮ್ ಸಿ, ಖಡೇಬಜಾರ ಪೊಲೀಸ್ ಠಾಣೆಯ ತಲಾ ಒಂದು ಸರಗಳ್ಳತನ ಪ್ರಕರಣಗಳಲ್ಲಿ ಹಾಗೂ ಗೋವಾ ರಾಜ್ಯದ ಮಡಗಾಂವ ಪೊಲೀಸ್ ಠಾಣೆಯ ಎರಡು ಸರಗಳ್ಳತನ ಪ್ರಕರಣಗಳಲ್ಲಿ ಹೀಗೆ ಒಟ್ಟು ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಬಂಧಿತರಿಂದ 9,15,000 ರೂ. ಮೌಲ್ಯದ ಒಟ್ಟು 80.36 ಗ್ರಾಂ ಬಂಗಾರದ ಆಭರಣಗಳು ಹಾಗೂ 50,000 ರೂ ಮೌಲ್ಯದ ಬೈಕ್, ರೂ.60,000 ರೂ. ಮೌಲ್ಯದ 200 ಮೋಟಾರ ಸೈಕಲ್ಹೀಗೆ ಒಟ್ಟು ಒಟ್ಟು 10,25,000 ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ತನಿಖಾ ತಂಡದಲ್ಲಿ ತಿಲಕವಾಡಿ ಪೊಲೀಸ್ ಇನ್ಸಪೆಕ್ಟರ್, ಪರಶುರಾಮ ಪೂಜೇರಿ, ಪಿಎಸ್‌ಐ ವಿಶ್ವನಾಥ ಘಂಟಾಮಠ, ಶ್ರಪ್ರಭಾಕರ ಡೊಳ್ಳಿ ಹಾಗೂ ಸಿಬ್ಬಂದಿಯವರಾದ ಮಹೇಶ ಪಾಟೀಲ, ಎಸ್ ಎಮ್ ಕರಲಿಂಗಣ್ಣವರ, ಲಾಡಜಿಸಾಬ ಮುಲ್ತಾನಿ, ನಾಗೇಂದ್ರ ತಳವಾರ, ಸತೀಶ ಗಿರಿ ರವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದಾರೆ. ಇವರ ಕಾರ್ಯ ವೈಖರಿಯನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

