*ಅಂಧರ ಕ್ರಿಕೆಟ್ ಟೂರ್ನಿಗೂ ಜಾಗತಿಕ ಮನ್ನಣೆ ಸಿಗುವಂತಾಗಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಅಂಧ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ: ವಿಶೇಷ ಮಕ್ಕಳು ಪಾಲ್ಗೊಳ್ಳುತ್ತಿರುವ ಅಂಧರ ಕ್ರಿಕೆಟ್ ಟೂರ್ನಿಗೆ ಜಾಗತಿಕವಾಗಿ ಮನ್ನಣೆ ಸಿಗಲಿ ಎಂಬುದೇ ನನ್ನ ಆಶಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಂಗಳೂರಿನ ತಿರುಮೇನಹಳ್ಳಿಯ ಸಂಪ್ರಸಿದ್ದಿ ಮೈದಾನದಲ್ಲಿ ನಡೆಯುತ್ತಿರುವ ಅಂಧ ಮಹಿಳೆಯರ ಮೊದಲ ಟಿ20 ವಿಶ್ವಕಪ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಸರಿಯಾಗಿ ಕೈಕಾಲು ಇದ್ದರೂ, ಕಣ್ಣುಗಳು ಕಾಣಿಸಿದರೂ ಸಾಮಾನ್ಯ ಜನರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಕಷ್ಟ. ಆದರೆ, ಸರಿಯಾಗಿ ಕಣ್ಣುಕಾಣದ ಮಕ್ಕಳು ಕ್ರಿಕೆಟ್ ಆಡುವುದು ಅಷ್ಟು ಸುಲಭವಲ್ಲ ಎಂದರು.
ಈ ಮಹತ್ವದ ಟೂರ್ನಿಯ ಪ್ರಮುಖ ಭಾಗವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ನಮ್ಮ ರಾಜ್ಯವು ಕ್ರೀಡೆಗೆ ಸಮಾನ ಅವಕಾಶಗಳನ್ನು ಉತ್ತೇಜಿಸುವಲ್ಲಿ ಮುಂಚೂಣಿಯಲ್ಲಿರುವುದು ಎಲ್ಲರೂ ತಿಳಿದಿರುವ ವಿಷಯ. ನಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಪಂದ್ಯ ವೀಕ್ಷಿಸಿದ ಸಚಿವರು
ಭಾರತ ಹಾಗೂ ನೇಪಾಳ ನಡುವಿನ ಪಂದ್ಯವನ್ನು ಕೆಲಕಾಲ ಸಚಿವರು ವೀಕ್ಷಿಸಿದರು. ಚಪ್ಪಾಳೆ ತಟ್ಟುವ ಮೂಲಕ ಎರಡೂ ತಂಡಗಳ ಆಟಗಾರ್ತಿಯರನ್ನು ಹುರಿದುಂಬಿಸಿದರು. ಬಳಿಕ ಕೆಲಕಾಲ ಪಂದ್ಯದ ವೀಕ್ಷಕ ವಿವರಣೆಯಲ್ಲಿ ಪಾಲ್ಗೊಂಡರು.
ಈ ವೇಳೆ ಸಮರ್ಥನಂ ಟ್ರಸ್ಟ್ ಸಂಸ್ಥಾಪಕರಾದ ಡಾ.ಮಹಾಂತೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.




