*ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕ ವಿಷಯಗಳ ಚರ್ಚೆಗೆ ಆದ್ಯತೆ: ಯು.ಟಿ.ಖಾದರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿ ಡಿಸೆಂಬರ್ 8 ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್ ತಿಳಿಸಿದರು.
ಸುವರ್ಣಸೌಧದಲ್ಲಿ ಮಾಧ್ಯಮಗೋಚಮಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿದಿನ 500 ವಿದ್ಯಾರ್ಥಿಗಳಿಗೆ ಸುಗಮ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು ವಿಶ್ವವಿದ್ಯಾನಿಲಯಗಳ ಆಯ್ದ 30 ವಿದ್ಯಾರ್ಥಿಗಳಿಗೆ ಇಡೀ ದಿನ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಸಮಾಜದ ಎಲ್ಲ ವರ್ಗದವರಿಗೆ ಕಲಾಪ ವೀಕ್ಷಣೆಗೆ ಅನುಕೂಲವಾಗುವಂತೆ ಕ್ರೀಡಾಪಟುಗಳು, ಮಹಿಳೆಯರು, ಕಾರ್ಮಿಕರು, ಪೌರಕಾರ್ಮಿಕರು, ತೃತೀಯಲಿಂಗಿಗಳು ಹೀಗೆ ಎಲ್ಲರಿಗೂ ವಿಶೇಷ ಅವಕಾಶ ನೀಡಲಾಗುವುದು ಎಂದರು
ಉತ್ತರ ಕರ್ನಾಟಕ ವಿಷಯಗಳ ಚರ್ಚೆಗೆ ಆದ್ಯತೆ ನೀಡಲಾಗುವುದು. ಬಿ.ಎ.ಸಿ. ಸಭೆಯಲ್ಲಿ ಚರ್ಚೆಯ ವಿಷಯಗಳ ಬಗ್ಗೆ ತೀರ್ಮಾನಿಸಲಾಗುವುದು. ಸದನದಲ್ಲಿ ಹಾಜರಾತಿ ಪ್ರಮಾಣ ಕ್ರಮೇಣ ಸುಧಾರಣೆಯಾಗುತ್ತಿದೆ. ಕಳೆದ ಬಾರಿಯ ಅಧಿವೇಶನ ಯಶಸ್ವಿಯಾಗಿದೆ ಎಂದರು
ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಸದನದ ನಿಯಮಾವಳಿಯ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಕಳೆದ ಬಾರಿ ಪ್ರತಿಭಟನಾ ಸ್ಥಳಗಳಿಗೆ ಸಚಿವರನ್ನು ಕಳುಹಿಸಿ ಜನರ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಲ ಕೂಡ ಅದೇ ಮಾದರಿಯಲ್ಲಿ ಕ್ರಮ ವಹಿಸಲಾಗುವುದು. ಕಬ್ಬು ಬೆಳೆಗಾರರ ಸಮಸ್ಯೆಗೆ ಸರಕಾರ ಸ್ಪಂದಿಸಿದೆ. ಅದಲ್ಲದೇ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಸ್ಯೆಗಳ ಬಗ್ಗೆ ಮುಂಚಿತಚಾಗಿ ಚರ್ಚಿಸಲು ತಿಳಿಸಲಾಗಿರುತ್ತದೆ ಎಂದರು.



