ಬಾಗ್ದಾದ್: ಇರಾಕ್ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇರಾನ್ ಪ್ರಭಾವಿ ನಾಯಕ ಹಾಗೂ ಮಿಲಿಟರಿ ಜನರಲ್ ಕಸ್ಸೆಮ್ ಸುಲೈಮಾನಿ ಸೇರಿ 7 ಜನರು ಮೃತಪಟ್ಟಿದ್ದಾರೆ. ಈ ಬಗ್ಗೆ ಅಮೆರಿಕ ದೃಢಪಡಿಸಿದೆ.
ಇಂದು ಬೆಳಿಗ್ಗೆ ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಅಮೆರಿಕಾ ವಾಯುದಾಳಿಯಲ್ಲಿ ಸುಲೈಮಾನಿಯನ್ನು ಹತ್ಯೆ ಮಾಡಿತ್ತು. ಇದು ಮಧ್ಯ ಪೂರ್ವ ದೇಶಗಳಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು, ಯುದ್ಧ ಭೀತಿ ತಲೆದೋರಿದೆ.
ಸುಲೈಮಾನಿ ಜೊತೆಗೆ ಇರಾಕ್‌ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಕೂಡ ಸಾವನ್ನಪ್ಪಿದ್ದಾರೆ ಎಂದು ಇರಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಬಾಗ್ದಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ರಾಕೆಟ್ ಉಡಾಯಿಸಿರುವ ಅಮೆರಿಕಾ, ಅವರು ಚಲಿಸುತ್ತಿದ್ದ ಎರಡು ಕಾರುಗಳನ್ನು ಧ್ವಂಸ ಮಾಡಿದೆ. ದಾಳಿ ಭೀಕರತೆಗೆ ಕಾರುಗಳು ಛಿದ್ರವಾಗಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ.
ಈ ನಡುವೆ ಸುಲೈಮನಿ ಹತ್ಯೆಯನ್ನು ವೈಟ್‌ಹೌಸ್ ಮತ್ತು ಪೆಂಟಗನ್ ಖಚಿತಪಡಿಸಿದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ದೇಶನದ ಮೇರೆಗೆ ಈ ದಾಳಿ ನಡೆಸಿದ್ದಾಗಿ ಹಾಗೂ ಭವಿಷ್ಯದಲ್ಲಿ ಅಮೆರಿಕಾ ಮೇಲೆ ಇರಾನ್ ದಾಳಿ ನಡೆಸಲು ಹಾಕಿಕೊಂಡಿದ್ದ ಯೋಜನೆಗಳ ದಿಕ್ಕು ತಪ್ಪಿಸಲು ಈ ದಾಳಿ ನಡೆಸಿದ್ದಾಗಿ ಅದು ಹೇಳಿದೆ.
ಜನರಲ್ ಸುಲೈಮಾನಿ ದೇಶದ ಹೆಮ್ಮೆ ಎಂಬುದು ಇರಾನ್ ಜನರ ಭಾವನೆಯಾಗಿತ್ತು. ಆದರೆ ಅಮೆರಿಕ ರಾಕೆಟ್ ದಾಳಿಯಲ್ಲಿ ಹತ್ಯೆಗೈದಿರುವುದು ಆಘಾತಕ್ಕೆ ಕಾರಣವಾಗಿದೆ. ಅಮೆರಿಕಾ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲ್ ಖಮೇನಿ ಸುಲೈಮಾನಿಯನ್ನು ‘ಹುತಾತ್ಮ’ ಎಂದು ಕರೆದಿದ್ದು, ದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕಾ ಈ ದಾಳಿಯ ಬೆಲೆ ತೆರಬೇಕಾಗುತ್ತದೆ. ತೀವ್ರವಾದ ಪ್ರತೀಕಾರ ಕಾದಿದೆ ಎಂದು ಎಚ್ಚರಿಸಿದ್ದಾರೆ.
ಕೆಲ ದಿನಗಳ ಹಿಂದೆ ಅಮೆರಿಕಾ ಇರಾನ್ ಬೆಂಬಲಿತ ಕತೈಬ್ ಹೆಜ್ಬುಲ್ಲಾ ಎಂದು ಕರೆಯಲ್ಪಡುವ ‘ಪಾಪ್ಯುಲರ್ ಮೊಬಿಲೈಸೇಷನ್ ಪೋರ್ಸಸ್’ ಮೇಲೆ ಇರಾಕ್-ಸಿರಿಯಾ ಗಡಿಯಲ್ಲಿ ದಾಳಿ ನಡೆದಿತ್ತು. ಇದರ ಬೆನ್ನಲ್ಲೇ ಬಾಗ್ದಾದ್ ನಲ್ಲಿದ್ದ ಅಮೆರಿಕಾ ರಾಯಭಾರ ಕಚೇರಿ ಮೇಲೆ ಇರಾನ್ ಬೆಂಬಲಿತ ಉಗ್ರರು ದಾಳಿ ಮಾಡಿದ್ದರು. ಈ ವೇಳೆ ಅಮೆರಿಕಾದ ಅಧಿಕಾರಿ ಸೇರಿದಂತೆ ಹಲಾವರು ಮೃತಪಟ್ಟಿದ್ದರು.
ಉಭಯದೇಶಗಳ ನಡುವಿನ ವಾತಾವರಣ ಸಂಪೂರ್ಣ ಹದಗೆಟ್ಟಿತ್ತು. ಈ ದಾಳಿಯ ಹಿಂದೆ ಸುಲೈಮಾನಿ ಕೈವಾಡವಿದೆ ಎಂದು ಅಮೇರಿಕಾ ಹೇಳಿತ್ತಲ್ಲದೇ ಪ್ರತಿಕಾರ ತೀರಿಸಿಕೊಳ್ಳುವ ಎಚ್ಚರಿಕೆ ನೀಡಿತ್ತು. ಆದರೆ ನಿಮಗೆ ಇಷ್ಟಬಂದಾಗ ನೀವು ಯುದ್ಧ ಆರಂಭಿಸಿ. ಆದರೆ, ಅದನ್ನು ಮುಗಿಸುವುದು ಮಾತ್ರ ನಾವೇ ಎಂದು ಸುಲೈಮಾನಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದ. ಇದೇ ಕಾರಣಗಳಿಂದಾಗಿ ಅಮೆರಿಕಾ ಸುಲೈಮಾನಿ ಹತ್ಯೆಗೈದಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ