*ದೂರದೃಷ್ಟಿ-ಅದೃಷ್ಟದ ಸಮ್ಮಿಳಿತ ; `ಬೆಳಗಾವಿಯ ಭವಿಷ್ಯ’ ಚನ್ನರಾಜ ಹಟ್ಟಿಹೊಳಿ*

ಬೆಳಗಾವಿಯ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ನಿರ್ದೇಶಕರಾಗಬೇಕೆಂದು ಚನ್ನರಾಜ ಹಟ್ಟಹೊಳಿ ಒಂದು ವರ್ಷದ ಹಿಂದೆಯೇ ನಿರ್ಧರಿಸಿದ್ದರು. ಈ ಬಗ್ಗೆ ತಮ್ಮ ರಾಜಕೀಯ ಗುರು, ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರೊಂದಿಗೂ ಚರ್ಚಿಸಿ ಒಪ್ಪಿಸಿದ್ದರು. ಆಗಿನಿಂದಲೇ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಮೊದಲ 6 ತಿಂಗಳು ಪೂರ್ವಾಪರಗಳ ಅಧ್ಯಯನ ಮಾಡಿದ್ದರು, ಕೊನೆಯ 6 ತಿಂಗಳಿರುವಾಗ ಕ್ಷೇತ್ರಕ್ಕಿಳಿದು ಕೆಲಸ ಮಾಡಿದ್ದರು. ಆದರೆ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಮುಜುಗರವಾಗಬಾರದೆನ್ನುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಾತಿಗೆ ಸಮ್ಮತಿಸಿ ಒಂದು ಹೆಜ್ಜೆ ಹಿಂದಿಟ್ಟಿದ್ದರು.

ಆದರೆ ಅದೃಷ್ಟ ಬೆನ್ನಿಗಿದ್ದರೆ ಯಾರೂ, ಏನೂ ಮಾಡಲು ಸಾಧ್ಯವಿಲ್ಲ. ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶದ ಪರಿಣಾಮವಾಗಿ ಚನ್ನರಾಜ ಅವರನ್ನು ಡಿಸಿಸಿ ಬ್ಯಾಂಕ್ ಪ್ಯಾನೆಲ್ ನಿಂದ ಹೊರಗಿಡದ ಅನಿವಾರ್ಯತೆ ಸೃಷ್ಟಿಯಾಯಿತು. ಅಂತಿಮವಾಗಿ ಇತರೇ ಕ್ಷೇತ್ರದಿಂದ ಅವರು ಅತ್ಯಂತ ಸುಲಭವಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಪ್ರವೇಶ ಪಡೆದರು.
ಇಲ್ಲಿ ಅದೃಷ್ಟ ಮಾತ್ರ ಕೆಲಸ ಮಾಡಲಿಲ್ಲ, ಅವರ ತಾಳ್ಮೆ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತು. ಖಾನಾಪುರ ಕ್ಷೇತ್ರದ ಕಣದಿಂದ ಹಿಂದಕ್ಕೆ ಸರಿಯುವ ಅನಿವಾರ್ಯತೆ ಬಂದಾಗ ಅವರು ದುಡುಕಿದ್ದರೆ ಬಹಳ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಹಾಗೆ ಮಾಡದೆ ಅತ್ಯಂತ ಸಂಯಮ ತೋರಿದರು. ಅದೇ ಅವರನ್ನು ನಾಯಕತ್ವದಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋಗುವಂತೆ ಮಾಡಿತು.

ಚನ್ನರಾಜ ಹಟ್ಟಿಹೊಳಿ ಅವರಲ್ಲಿ ಮುಖ್ಯವಾಗಿ ಕಾಣಬಹುದಾದದ್ದು ಅಛಲವಾದ ಆತ್ಮವಿಶ್ವಾಸ. ಅವರು ವಿಧಾನ ಪರಿಷತ್ ಸದಸ್ಯರಾಗಬೇಕೆಂದು 6 ತಿಂಗಳ ಮೊದಲು ನಿರ್ಧರಿಸಿದರು. ಆ ನಿರ್ಧಾರ ಎಷ್ಟು ಬಲವಾಗಿತ್ತೆಂದರೆ, ಡಿಸೆಂಬರ್ ನಲ್ಲಿ ನಾನು ವಿಧಾನಪರಿಷತ್ ನಲ್ಲಿರುತ್ತೇನೆ ಎಂದು ದೃಢವಾಗಿ ಹೇಳಿದ್ದರು. ಆಗಿನ್ನೂ ಅವರ ಸ್ಫರ್ಧೆಗೆ ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಕೂಡ ಒಪ್ಪಿರಲಿಲ್ಲ. ತಾವು ಶಾಸಕಿಯಾಗಿರುವಾಗ ಸಹೋದರನಿಗೆ ವಿಧಾನ ಪರಿಷತ್ ಟಿಕೆಟ್ ಕೇಳುವುದು ಹೇಗೆ ಎನ್ನುವ ಗೊಂದಲ, ಹಿಂಜರಿಕೆ ಅವರನ್ನು ಕಾಡುತ್ತಿತ್ತು. ಆದರೆ ತಮ್ಮ ವಿಧಾನ ಪರಿಷತ್ ಪ್ರವೇಶ ವೈಯಕ್ತಿಕ ಕಾರಣಕ್ಕಿಂತ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ದೃಷ್ಟಿಯಿಂದ ಅಗತ್ಯ ಎನ್ನುವುದನ್ನು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಚನ್ನರಾಜ ಮನದಟ್ಟು ಮಾಡಿಕೊಟ್ಟರು. ಅಂದಿನ ಸಂದರ್ಭದಲ್ಲಿ ಅವರಲ್ಲದಿದ್ದರೆ ಕಾಂಗ್ರೆಸ್ ಆ ಸ್ಥಾನವನ್ನು ಕಳೆದುಕೊಳ್ಳುತ್ತಿತ್ತು.
`ಲಕ್ಷ್ಮೀ ಹೆಬ್ಬಾಳಕರ್ ಅವರು ಮುಂದಿನ ವರ್ಷ ಈ ಸಮಯಕ್ಕೆ ಮಂತ್ರಿಯಾಗಿರುತ್ತಾರೆ’ ಎಂದು ಚನ್ನರಾಜ ಹಟ್ಟಿಹೊಳಿ ಒಂದು ವರ್ಷ ಮೊದಲೇ ಭವಿಷ್ಯ ನುಡಿದಿದ್ದರು. ಆ ಸಂದರ್ಭದಲ್ಲಿ ಎದುರಿಗಿದ್ದವರಿಗೆ ಅದೊಂದು ಅತಿ ವಿಶ್ವಾಸ ಎನಿಸಿದ್ದರೂ, ಅವರಲ್ಲಿ ಮಾತ್ರ ದೃಢ ವಿಶ್ವಾಸ ತುಂಬಿತ್ತು. ಚನ್ನರಾಜ ಹಟ್ಟಿಹೊಳಿ ಅವರದ್ದು ಅತ್ಯಂತ ಚಾಣಾಕ್ಷ ಬುದ್ದಿ, ಎದುರಿಗಿದ್ದವರನ್ನು ಒಂದೇ ಕ್ಷಣದಲ್ಲಿ ಅಳೆದು ತೂಗುವ ಸಾಮರ್ಥ್ಯ ಅವರದ್ದು. ಇವರು ತಮ್ಮ ಕೈ ಬಿಡುವುದಿಲ್ಲ, ತಮ್ಮ ಜೊತೆ ನಿಲ್ಲುತ್ತಾರೆ ಎನ್ನುವ ವಿಶ್ವಾಸ ಮೂಡಿದರೆ ಅಂತವರನ್ನು ಎಂದಿಗೂ ಕೈಬಿಡುವುದಿಲ್ಲ.

ಯಾವುದೇ ಕೆಲಸಕ್ಕೆ ಕೈ ಹಾಕುವಾಗ ನೂರು ಬಾರಿ ಯೋಚಿಸುತ್ತಾರೆ, ಆದರೆ, ಬಲವಾದ ಕಾರಣವಿಲ್ಲದಿದ್ದರೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವ ಜಾಯಮಾನ ಅವರದ್ದಲ್ಲ. ಮಲಪ್ರಭಾ ಸಕ್ಕರೆ ಕಾರ್ಖಾನೆಯ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ನಿರ್ಧರಿಸಿದ ಸಂದರ್ಭ ಇದಕ್ಕೆ ಮತ್ತೊಂದು ತಾಜಾ ಉದಾಹರಣೆ. ಮುಳುಗುತ್ತಿದ್ದ ಕಾರ್ಖಾನೆಯನ್ನು ಉಳಿಸಬೇಕು, ರೈತರ ಹಿತ ಕಾಪಾಡಬೇಕು. ಇದರಿಂದ ರಾಜಕೀಯವಾಗಿಯೂ ತಮ್ಮ ಮತ್ತೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಾಯಕತ್ವ ಬೆಳೆಯುತ್ತದೆ ಎನ್ನುವ ಯೋಚನೆಯಿಂದ ಮುಂದಡಿ ಇಟ್ಟರು. ಆದರೆ ಹತ್ತಿರ ಹೋಗಿ ನೋಡಿದಾಗ ಕಾರ್ಖಾನೆ ಎಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಹೋಗಿದೆ ಎನ್ನುವುದು ತಿಳಿಯಿತು. ಒಂದು ಕ್ಷಣ ಧೃಗೆಡುವಂತಾದರೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡದೇ ಚುನಾವಣೆಗೆ ಧುಮುಕಿ ಜಯಿಸಿದರು, ಕಾರ್ಖಾನೆ ಸುಧಾರಣೆಯತ್ತೆ ಹೆಜ್ಜೆ ಹಾಕಿದರು.
ಬೆಳಗಾವಿ ಜಿಲ್ಲೆಯಲ್ಲಿ ಎಲ್ಲ ರಾಜಕಾರಣಿಗಳೂ ವಯಕ್ತಿಕವಾಗಿ ಬಲಾಢ್ಯರೇ. ಆದರೆ ಒಟ್ಟಾಗಿ ಹೋಗುವ ನಾಯಕತ್ವದ ಕೊರತೆ ಇದೆ. ಚನ್ನರಾಜ ಹಟ್ಟಿಹೊಳಿ ಅವರಲ್ಲಿ ಅಂತಹ ಕೊರತೆಯನ್ನು ತುಂಬುವ ಗುಣ ಕಾಣುತ್ತಿದೆ. ಸಧ್ಯದ ಮಟ್ಟಿಗೆ, ಅದರಲ್ಲೂ ಡಿಸಿಸಿ ಬ್ಯಾಂಕ್ ರಾಜಕಾರಣದ ನಂತರದಲ್ಲಿ ಎಲ್ಲರೊಂದಿಗೆ ಅವರ ಬಾಂಧವ್ಯ ಸಕಾರಾತ್ಮಕವಾಗಿ ಬದಲಾಗಿದೆ. ಇದನ್ನೇ ಬೆಳೆಸಿಕೊಂಡು ಹೋದರೆ, ಜಿಲ್ಲಾ ನಾಯಕತ್ವ ಮತ್ತು ರಾಜ್ಯದಲ್ಲೂ ಒಬ್ಬ ಲೀಡರ್ ಆಗಿ ಬೆಳೆಯುವ ಅವಕಾಶ ಅವರಿಗೆ ಕಾಣುತ್ತಿದೆ.
ಒಬ್ಬ ಉದ್ಯಮಿಯಾಗಿಯೂ ಚನ್ನರಾಜ ಹಟ್ಟಿಹೊಳಿ ಅವರ ದಾರಿ ಅತ್ಯಂತ ಪ್ರಕಾಶಮಾನವಾಗಿ ಬೆಳೆಯುತ್ತಿದೆ. ಹರ್ಷ ಸಕ್ಕರೆ ಕಾರ್ಖಾನೆಯಿಂದ ಆರಂಭವಾದ ಜರ್ನಿ, ರಿಯಲ್ ಎಸ್ಟೇಟ್, ಸಹಕಾರಿ ಸಂಘ ಸ್ಥಾಪನೆ, ಹೊಟೆಲ್ ಉದ್ಯಮ, ಫಿಲ್ಮ್ ಇಂಡಸ್ಟ್ರೀ.. ಹೀಗೆ ಒಂದೊಂದೇ ಮೆಟ್ಟಿಲಾಗಿ ಇಡೀ ಕುಟುಂಬವನ್ನು ಔದ್ಯೋಗಿಕವಾಗಿಯೂ ಮುನ್ನಡೆಸುತ್ತಿದ್ದಾರೆ. ಒಬ್ಬರಿಗೊಬ್ಬರು ಮಾರ್ಗದರ್ಶನ ಮಾಡುತ್ತ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಬೆಳವಣಿಗೆಯ ಪ್ರತಿ ಹಂತದಲ್ಲೂ ಬೆನ್ನಿಗೆ ನಿಂತಿದ್ದಾರೆ. ನಿರಂತರ ಕ್ರಿಯಾಶೀಲತೆಯಿಂದ ವಯಕ್ತಿಕವಾಗಿ, ಕೌಟುಂಬಿಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ವಿಶ್ವಾಸದ ಹೆಜ್ಜೆ ಹಾಕುತ್ತಿರುವ ಅವರ ಭವಿಷ್ಯ ಉಜ್ವಲವಾಗಲಿ ಎನ್ನುವುದು ಅವರ ಜನ್ಮದಿನದ ಸಂದರ್ಭದಲ್ಲಿ ಶುಭ ಹಾರೈಕೆ.


