*ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಜೈನ್ ಹೆರಿಟೇಜ್ ಸ್ಕೂಲ್ ಒತ್ತು – ಎಸ್ಪಿ ಡಾ.ಭೀಮಾಶಂಕರ ಗುಳೇದ* *ಪಾಲಕರು ಎಷ್ಟೇ ಬ್ಯುಸಿ ಇದ್ದರೂ ಮಕ್ಕಳ ಚಟುವಟಿಕೆ ಮೇಲೆ ಗಮನ ಇಡಬೇಕು*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜೈನ್ ಹೆರಿಟೇಜ್ ಸ್ಕೂಲ್ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಒತ್ತು ನೀಡುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.
ಶುಕ್ರವಾರ ಸಂಜೆ, ರಾಣಿ ಚನ್ನಮ್ಮ ನಗರದ ಜೈನ್ ಹೆರಿಟೇಜ್ ಸ್ಕೂಲ್ ನ 15ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡುತ್ತಿದ್ದರು. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಒತ್ತು ಕೊಟ್ಟು ಮಕ್ಕಳನ್ನು ಬೆಳೆಸಲಾಗುತ್ತಿದೆ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಇದು ಅಗತ್ಯ ಎಂದು ಅವರು ಹೇಳಿದರು.

ನಾವು ಚಿಕ್ಕವರಿದ್ದಾಗ ಅವಕಾಶಗಳು ಸಿಗುತ್ತಿರಲಿಲ್ಲ. ಅಂದಿನ ಪರಿಸ್ಥಿತಿಯನ್ನು ಇಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ನಾನು 11ನೇ ತರಗತಿಯಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಮುಟ್ಟಿದ್ದು, ಆದರೆ ಇಂದು ನರ್ಸರಿಯಲ್ಲೇ ಮಕ್ಕಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ಹಿಂದೆನಾವು ಕೇವಲ ದೃಶ್ಯ ಮಾಧ್ಯಮದಲ್ಲಿ ನೋಡುತ್ತಿದ್ದುದನ್ನು ಇಂದು ಮಕ್ಕಳು ಸ್ವತಃ ಮಾಡುತ್ತಿದ್ದಾರೆ. ಇದು ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಗುಳೇದ ಹೇಳಿದರು.
ಪಾಲಕರು ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕು. ಮಕ್ಕಳ ಕಲಿಕೆ, ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಅತ್ಯಂತ ಅಗತ್ಯವಾಗಿದೆ ಎಂದೂ ಅವರು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಬಹುಮಾನಗಳನ್ನು ವಿತರಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಸ್ಥೆಯ ನಿರ್ದೇಶಕಿ ಶೃದ್ಧಾ ಖಟವಟೆ, ಮುಖ್ಯ ಆಡಳಿತಾಧಿಕಾರಿ ಆ್ಯನಿ ದೋಷಿ, ಪ್ರಾಚಾರ್ಯೆ ರೋಹಿಣಿ ಕೆಬಿ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಸೌಮ್ಯಾ ಬಾಪಟ್, ಉಪಪ್ರಾಚಾರ್ಯರು ಸೇರಿದಂತೆ ಶಿಕ್ಷಕರು, ಸಿಬ್ಬಂದಿ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



