*ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿ ಟೆಕ್ಕಿಯಿಂದ 48 ಲಕ್ಷ ದೋಚಿದ ಗುರೂಜಿ: ಔಷಧಿ ಸೇವಿಸಿದ ವ್ಯಕ್ತಿಗೆ ಶುರುವಾಯ್ತು ಕಿಡ್ನಿ ಸಮಸ್ಯೆ*

ಪ್ರಗತಿವಾಹಿನಿ ಸುದ್ದಿ: ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ನಂಬಿಸಿ ಟೆಕ್ಕಿಯೊಬ್ಬರಿಗೆ 48 ಲಕ್ಷ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವ್ಯಕ್ತಿಯೋರ್ವ ಟೆಕ್ಕಿಯನ್ನು ವಿಜಯ್ ಗುರೂಜಿ ಬಳಿ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಕರೆದೊಯ್ದು ವಂಚಿಸಿದ್ದಾನೆ. ಟೆಕ್ಕಿ ಮೂದಲು ಕೆಂಗೇರಿ ಬಳಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದ. ಆಸ್ಪತ್ರೆಯಿಂದ ವಾಪಸ್ ಆಗುವಾಗ ಟೆಂಟ್ ವೊಂದರ ಬಳಿ ವ್ಯಕ್ತಿಯೊಬ್ಬ ಟೆಂಟ್ ವೊಂದರಲ್ಲಿ ವಿಜಯ್ ಗುರೂಜಿ ಎಂಬುವವರು ಚಿಕಿತ್ಸೆ ನೀಡುತ್ತಾರೆ ಎಂದು ಕರೆದೊಯ್ದಿದ್ದಾನೆ.
ಟೆಕ್ಕಿಗೆ ಗುರೂಜಿ ದೇವರಾಜ್ ಬೂಟಿ ಎಂಬ ಔಷಧ ಕೊಟ್ಟಿದ್ದರಂತೆ. ಅಲ್ಲದೇ ತಮ್ಮ ಬಳಿ ಮತ್ತೆ ಚಿಕಿತ್ಸೆಗೆ ಬರಬೇಕು ಇಲ್ಲವಾದಲ್ಲಿ ಚಿಕಿತ್ಸೆ ಫಲಕಾರಿಯಾಗಲ್ಲ ಎಂದು ಹೇಳಿದ್ದರಂತೆ. ಒಂದು ಗ್ರಾಂ ಔಷಧಿಗೆ 1,60,000 ರೂಪಾಯಿ ಬೆಲೆ ನಿಗದಿ ಮಾಡಿ ಯಶವಂತಪುರದ ಆಯುರ್ವೇದಿಕ್ ಶಾಪ್ ವೊಂದರಲ್ಲಿ ಮಾತ್ರೆಗಳನ್ನು ಖರೀದಿ ಮಾಡುವಂತೆ ಹೇಳಿದ್ದಾರೆ. ಆನ್ ಲೈನ್ ಪೇಮೆಂಟ್ ಮಾಡುವಂತಿಲ್ಲ, ಬೇರೆ ಯಾರೊಂದಿಗೂ ಬರುವಂತಿಲ್ಲ ಎಂದು ಕಂಡಿಷನ್ ಹಾಕಿದ್ದರಂತೆ.
ಗುರೂಜಿ ಹೇಳಿದಂತೆ ನಡೆದುಕೊಂಡ ಟೆಕ್ಕಿ ಹಲವು ಬಾರಿ ದೇವರಾಜ್ ಬೂಟಿ ಹಾಗೂ ಭವನ ಬೂಟಿ ತೈಲ ಖರೀದಿಸಿದ್ದಾರೆ. ಒಟ್ಟು 17 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಆದರೂ ಬ್ಯಾಂಕ್ ನಲ್ಲಿ 20 ಲಕ್ಷ ಸಾಲ ಮಾಡಿ 18 ಗ್ರಾಂ ಔಷಧಿ ಮತ್ತೆ ಖರೀದಿಸಿದ್ದಾರೆ. ಒಟ್ಟು 48 ಲಕ್ಷ ಖರ್ಚು ಮಾಡಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದಂತೆ ಟೆಕ್ಕಿಗೆ ಆರೋಗ್ಯ ಸಮಸ್ಯೆಯೂ ಕಾಡಲಾರಂಭಿಸಿದೆ. ಬ್ಲಡ್ ಟೆಸ್ಟ್ ಮಾಡಿಸಿದಾಗ ಆಯುರ್ವೇದ ಔಷಧಿಯಿಂದ ಕಿಡ್ನಿ ಸಮಸ್ಯೆಯಾಗಿರುವುದು ಪತ್ತೆಯಾಗಿದೆ.
ಮೋಸ ಹೋಗಿರುವುದರ ಜೊತೆಗೆ ಆರೋಗ್ಯ ಸಮಸ್ಯೆಯನ್ನೂ ತಂದುಕೊಂಡ ಟೆಕ್ಕಿ, ವಿಜಯ್ ಗುರೂಜಿ ಹಾಗೂ ಆಯುರ್ವೇದಿಕ್ ಮೆಡಿಕಲ್ ಶಾಪ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.



