3.65 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಬೇಕೆನ್ನುವ ನನ್ನ ಸಂಕಲ್ಪದಲ್ಲಿ ಯಾವುದೇ ಹಿಂಜರಿಕೆ ಇಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
3.65 ಕೋಟಿ ರೂ.ವೆಚ್ಚದಲ್ಲಿ ಹಿಂಡಲಗಾ -ಬಾಚಿ ರಸ್ತೆಯ 8 ಕಿಮೀ ಕಾಮಗಾರಿಗೆ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ರಾಜಕಾರಣ ಚುನಾವಣೆ ಸಮಯಕ್ಕಷ್ಟೇ ಸೀಮಿತವಾಗಿರಬೇಕು. ನಂತರ ನಾವೆಲ್ಲರೂ ಜನಪ್ರತಿನಿಧಿಗಳು. ಜನರ ಸೇವೆಯಷ್ಟೇ ನಮ್ಮ ಧ್ಯೇಯವಾಗಿರಬೇಕು. ಅಭಿವೃದ್ಧಿಯಷ್ಟೆ ನಮ್ಮ ಗುರಿಯಾಗಿರಬೇಕು ಎಂದು ಅವರು ಹೇಳಿದರು.
ಸರಕಾರ ಯಾವುದೇ ಬಂದರೂ ಪಕ್ಷ ಭೇದ ಮಾಡದೆ ಎಲ್ಲ ಕ್ಷೇತ್ರಗಳಿಗೂ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡಬೇಕು. ಬೆಳಗಾವಿ ಗ್ರಾಮೀಣ ಕ್ಷೇತ್ರದಂತಹ ಅತ್ಯಂತ ಹಿಂದುಳಿದ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಈ ಕ್ಷೇತ್ರ ಕಳೆದ ಹಲವಾರು ವರ್ಷಗಳಿಂದ ಅಭಿವೃದ್ಧಿ ಯೋಜನೆಗಳಿಂದ ವಂಚಿತವಾಗಿತ್ತು. ಹಾಗಾಗಿ ಸಹಜವಾಗಿ ಸರಕಾರ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ವಿವರಿಸಿದರು.
ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಾಗೂ ಅಭಿವೃದ್ಧಿಯ ಸ್ಪರ್ಶವನ್ನೆ ಕಾಣದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು, ಇವತ್ತು ಲೋಕೋಪಯೋಗಿ ಇಲಾಖೆಯ ವತಿಯಿಂದ 3.65 ಕೋಟಿ ರೂ. ಗಳ ವೆಚ್ಚದಲ್ಲಿ ಈ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಚಾಲನೆಯನ್ನು ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಕಾಮಗಾರಿಯ ಪೂಜಾ ಸಂದರ್ಭದಲ್ಲಿ ಹಿರಿಯರು, ಗ್ರಾಮದ ಜನತೆ, ಯುವರಾಜ ಕದಂ, ಜಿಲ್ಲಾ ಪಂಚಾಯತ್ ಸದಸ್ಯರಾದ ಮಾಧುರಿ ಹೆಗಡೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಚೇತನ ಅಷ್ಟಗೇಕರ್, ರಾಮಚಂದ್ರ ಕುದ್ರೆಮನಿಕರ್, ವಿಠ್ಠಲ ದೇಸಾಯಿ, ಮಿಥುನ ಉಸೂಲಕರ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಠ್ಠಲ ಬೆಳಗಾಂವಕರ್, ಕೃಷ್ಣ ಪಾವಸೆ, ಪ್ರಕಾಶ ಬೆಳಗಾಂವಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ