ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ವಿಳಂಬವಾಗುತ್ತಿರುವ ಬೆನ್ನಲ್ಲೇ ಒಂದೆಡೆ ಉಪಚುನಾವಣೆಯಲ್ಲಿ ಗೆದ್ದ ಶಾಸಕರಿಗೆ ಟೆನ್ ಶನ್ ಶುರುವಾಗಿದೆ. ಇನ್ನೊಂದೆಡೆ ಸೋತ ನಾಯಕರು ತಮಗೂ ಕೂಡ ಸಚಿವ ಸ್ಥಾನ ನೀಡಬೇಕೆಂದು ಒತ್ತಡ ಹೇರುತ್ತಿದ್ದಾರೆ.
ಉಪಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್ ಹಾಗೂ ಹೆಚ್.ವಿಶ್ವಾನಾಥ್ ತಮಗೂ ಸಚಿವ ಸ್ಥಾನ ನೀಡಬೇಕು ಎಂದು ಭಾರಿ ಲಾಭಿ ನಡೆಸಿದ್ದಾರೆ. ಈಗಾಗಲೇ ಹಲವು ಬಾರಿ ಸಿಎಂ ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾಗಿ ಒತ್ತಡ ಹೇರಿರುವ ಇಬ್ಬರು ನಾಯಕರು, ಇಂದು ಕೂಡ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಎಂಟಿಬಿ ಹಾಗೂ ವಿಶ್ವಾನಾಥ್ ತಮಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಬೇಡಿಕೆಯಿಟ್ಟಿದ್ದಾರೆ. ಅಲ್ಲದೇ ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ.
15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ಮತ್ತು ಹುಣಸೂರಿನಲ್ಲಿ ಕಾಂಗ್ರೆಸ್ ನ ಹೆಚ್.ಪಿ. ಮಂಜುನಾಥ್ ವಿರುದ್ಧ ಹೆಚ್.ವಿಶ್ವನಾಥ್ ಪರಾಭವಗೊಂಡಿದ್ದರು. ಗೆದ್ದ ಅಭ್ಯರ್ಥಿಗಳಿಗಷ್ಟೇ ಸಚಿವ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಹೇಳುತ್ತಿರುವ ಹಿನ್ನೆಲೆಯಲ್ಲಿ ಸೋತ ಅಭ್ಯರ್ಥಿಗಳಾದ ಎಂಟಿಬಿ ಹಾಗೂ ವಿಶ್ವನಾಥ್ ಗೆ ತಲೆಬಿಸಿ ಆರಂಭವಾಗಿದೆ.
ಸುಪ್ರಿಂ ಕೋರ್ಟ್ ನಿರ್ದೇಶನ ಉಲ್ಲಂಘನೆ?
ಅನರ್ಹ ಶಾಸಕರು ಗೆದ್ದು ಬಂದ ನಂತರ ಅವರಿಗೆ ಮಂತ್ರಿ ಸ್ಥಾನ ಕೊಡಬಹುದು ಎಂದು ಸುಪ್ರಿಂ ಕೋರ್ಟ್ ಈ ಹಿದಿನ ತೀರ್ಪಿನ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಸೋತಿರುವ ವಿಶ್ವನಾಥ್ ಮತ್ತು ನಾಗರಾಜ್ ಅವರಿಗೆ ಮಂತ್ರಿಸ್ಥಾನ ಕೊಡಲು ಸಾಧ್ಯವಿಲ್ಲ.
ಆದಾಗ್ಯ ಇವರಿಬ್ಬರೂ ಒತ್ತಡ ಹೇರುತ್ತಿರುವುದು ಕುತೂಹಲ ಮೂಡಿಸಿದೆ. ಬದಲಿ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದಾರೋ ಎನ್ನುವ ಅನುಮಾನ ಬರುವಂತಾಗಿದೆ. ಅಥವಾ ನಿಗಮ, ಮಂಡಳಿಗಳ ಬೇಡಿಕೆ ಇಟ್ಟಿದ್ದಾರೋ ಎನ್ನುವ ಸಂಶಯ ಕೂಡ ಉಂಟಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ