ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಳ್ಳತನದ ಮಾಲನ್ನು ಅಡವಿಟ್ಟುಕೊಂಡು ಹಣ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಕದ್ದ ಮಾಲ್ ಗಳನ್ನು ಅಡವಿಟ್ಟುಕೊಂಡು ಹಣ ನೀಡುತ್ತಿದ್ದಾರೆ ಎಂಬ ಆರೋಪ ಬಾಬು ವಿರುದ್ಧ ಕೇಳಿಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಅಟ್ಟಿಕಾ ಗೋಲ್ಡ್ ಕಂಪನಿ ವಿರುದ್ಧ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದರು. ಬಳಿಕ ತಡರಾತ್ರಿ ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ಬಾಬು ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದೆ. ಆದರೆ ದಾಳಿ ವೇಳೆ ಯಾವುದೇ ಚಿನ್ನಾಭರಣ ಸಿಗದೇ ಬರಿಗೈಲಿ ಪೊಲೀಸರು ವಾಪಾಸ್ ಆಗಿದ್ದಾರೆ.
ಪೊಲೀಸರು ಅಟ್ಟಿಕಾ ಗೋಲ್ಡ್ ಮಾಲೀಕ ಬಾಬು ಮನೆಯ ಲಾಕರ್ ನ್ನು ಗ್ಯಾಸ್ ಕಟರ್ ಬಳಸಿ ಓಪನ್ ಮಾಡಿ ಪರಿಶೀಲಿಸಿದ್ದಾರೆ. ಲಾಕರ್ನಲ್ಲೂ ಯಾವುದೇ ಚಿನ್ನಾಭರಣ ಪೊಲೀಸರಿಗೆ ಸಿಕ್ಕಿರಲಿಲ್ಲ.
ದಾಳಿ ಬಗ್ಗೆ ಸಿಸಿಬಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಾಗಲೇ ಪೊಲೀಸರೇ ಅಟ್ಟಿಕಾ ಗೋಲ್ಡ್ ಮಾಲೀಕ ಬಾಬುಗೆ ರೈಡ್ ಬಗ್ಗೆ ಮಾಹಿತಿ ಕೊಟ್ಟಿರೋ ಶಂಕೆ ಕೂಡ ವ್ಯಕ್ತವಾಗಿದೆ. ಹಾಗಾಗಿ ಆತ ಮೊದಲೇ ಚಿನ್ನಾಭರಣಗಳನ್ನು ಬೇರೆಡೆ ಸ್ಥಳಾಂತರಿಸಿದ್ದಾನೆ ಎನ್ನಲಾಗಿದೆ. ಈ ನಿಟ್ಟಿನಲ್ಲಿಯೂ ಕೂಡ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ