*ಬೆಳಗಾವಿ ಅಧಿವೇಶನದ ವೇಳೆ ಮರಾಠಿ ಮೇಳಾವ್ ನಡೆಸಲು ಮುಂದಾದ ಎಂಇಎಸ್ ಪುಂಡರ ಗಡಿಪಾರಿಗೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಸಂಧರ್ಭದಲ್ಲಿ ಮರಾಠಿ ಮೇಳಾವ್ ನಡೆಸಲು ನಿರ್ಧರಿಸಿರುವ ಎಂಇಎಸ್ ಪುಂಡರನ್ನು ಬಂಧಿಸಿ ಗಡಿಪಾರು ಮಾಡುವಂತೆ ಜಿಲ್ಲಾ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷಬೀಜ ಬಿತ್ತಿ ,ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಲು ಬೆಳಗಾವಿಯಲ್ಲಿ ಪದೇ ಪದೇ ನಾಡವಿರೋಧಿ ಚಟುವಟಿಕೆಗಳನ್ನು ನಡೆಸಿ ಬೆಳಗಾವಿಯ ಶಾಂತಿಗೆ ಭಂಗ ತರುತ್ತಿರುವ ಎಂಇಎಸ್ ಸಂಘಟನೆಯನ್ನು ತಕ್ಷಣ ನಿಷೇಧಿಸುವ ನಿರ್ಣಯವನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿಯ ಕನ್ನಡಿಗರು ರಾಜ್ಯೋತ್ಸವದ ಸಂಭ್ರಮ ಪಡುವಾಗ ಕರಾಳ ದಿನಾಚರಣೆ ಮಾಡುವದು, ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂಧರ್ಭದಲ್ಲಿ ಮರಾಠಿ ಮೇಳಾವ್ ಮಾಡುವ ಮೂಲಕ ಬೆಳಗಾವಿ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಅವರನ್ನು ರಾಜ್ಯ ಸರ್ಕಾರದ ವಿರುದ್ಧ ಎತ್ತಿಕಟ್ಟುವ ಮೂಲಕ ಬೆಳಗಾವಿಯಲ್ಲಿ ನಿರಂತರವಾಗಿ ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಪುಂಡರನ್ನು ಕೂಡಲೇ ಬಂಧಿಸಬೇಕು, ಮರಾಠಿ ಮೇಳಾವ್ ಕಾರ್ಯಕ್ರಮಕ್ಕೆ ಸರ್ಕಾರ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರ ಎಂಇಎಸ್ ನಾಯಕರಿಗೆ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಲು ನಿರಂತರವಾಗಿ ಅನುಮತಿ ನೀಡುತ್ತಲೇ ಬಂದಿದೆ. ಸರ್ಕಾರದ ಈ ನಾಡವಿರೋಧಿ ಧೋರಣೆ ನಿಲ್ಲಿಸಬೇಕು. ಶಾಶ್ವತವಾಗಿ ಎಂಇಎಸ್ ಸಂಘಟನೆಯನ್ನು ನಿಷೇಧಿಸುವ ಮೂಲಕ ಕನ್ನಡಿಗರ ಹಿತಾಸಕ್ತಿಯನ್ನು ಕಾಯಬೇಕು ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.




