ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಎ ಹಾಗೂ ಎನ್ ಆರ್ ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಅಸ್ಸಾಂ ನಲ್ಲಿ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ ಐವರಲ್ಲಿ ನಾಲ್ವರು ಹಿಂದೂಗಳು. ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆಯೇ ಗೋಲಿಬಾರ್ ನಡೆಸಿ, ಇಬ್ಬರನ್ನು ಬಲಿ ಪಡೆದಿದ್ದಾರೆ. ಹಲವೆಡೆ ಪ್ರತಿಭಟನೆ ನಡೆಸುತ್ತಿರುವ ಹಿಂದೂಗಳ ಮೇಲೂ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ದೇಶಾದ್ಯಂತ ಸಿಎಎ ಹಾಗೂ ಎನ್ ಆರ್ ಸಿ ಬಗ್ಗೆ ಜನರಿಗೆ ಅರಿವಾಗಿ ಅವರೇ ಸ್ವಯಂ ಪ್ರೇರಿತರಾಗಿ ಹೋರಾಟ ನಡೆಸುತ್ತಿದ್ದಾರೆ. ಎಲ್ಲಾ ಜಾತಿ, ಧರ್ಮದವರೂ ಹೋರಾಟ ನಡೆಸುತ್ತಿದ್ದಾರೆ ಎಂದರು.
ಜನರೇ ಸ್ವಯಂ ಪ್ರೇರಿತರಾಗಿ ಎಚ್ಚೆತ್ತು ಹೋರಾಟ ನಡೆಸುತ್ತಿರುವ ಇಂತಹ ಸಂಗತಿಯನ್ನು ನಾನು ಕೆಲ ದಶಕಗಳಿಂದ ನೋಡಿಲ್ಲ. ಸಿಎಎ ಕಾಯ್ದೆ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಇದು ಧರ್ಮದ ಹೋರಾಟವಲ್ಲ, ದೇಶಕ್ಕಾಗಿ ನಡೆಸುತ್ತಿರುವ ಹೋರಾಟ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇವಲ ಭಾರತದಲ್ಲಿ ಮಾತ್ರವಲ್ಲ, ಫ್ರಾನ್ಸ್, ಜರ್ಮನ್ ಕೂಡ ಆತಂಕ ವ್ಯಕ್ತಪಡಿಸುತ್ತಿದೆ. ಸಿಎಎಯಿಂದ ಆಲ್ಪಸಂಖ್ಯಾತ ಸಮುದಾಯಗಳಿಗೆ ಯಾವುದೇ ತೊಂದರೆಯಾಗದು ಎಂದು ಹೇಳುತ್ತಾ, ಕೇವಲ ಮುಸ್ಲೀಮರು ಮಾತ್ರ ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬಿಂಬಿಸಿ ಪ್ರಧಾನಿ ಮೋದಿ ದೇಶದ ಜನರ ಕಣ್ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಕಾಯ್ದೆ ಜಾರಿಗೆ ಬಿಜೆಪಿ ಮೈತ್ರಿ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸುತ್ತಿವೆ. ಮೈತ್ರಿ ಪಕ್ಷವಾದ ಜೆಡಿಯುನ ನಿತೀಶ್ ಕುಮಾರ್ ವಿರೋಧಿಸಿದ್ದಾರೆ. ಒರಿಸ್ಸಾದ ಬಿಜು ಜನತಾದಳವೂ ವಿರೋಧಿಸಿದೆ. ಆಂಧ್ರಪ್ರದೇಶ, ತೆಲಂಗಾಣ ನಾಯಕರೂ ಕೂಡ ಇದಕ್ಕೆ ವಿರುದ್ಧವಾಗಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದೆ, ಉದ್ಯೋಗ ಸೃಷ್ಟಿಯಾಗಿಲ್ಲ, ಯಾವುದೇ ವಿದೇಶಿ ಬಂಡವಾಳ ಕೂಡ ದೇಶಕ್ಕೆ ಹರಿದು ಬರುತ್ತಿಲ್ಲ. ರೈತರ ಅಭಿವೃದ್ಧಿ ಬಗ್ಗೆ ಕೇಂದ್ರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ. ಜನರ ಸಂಕಷ್ಟಗಳನ್ನು ಬಗೆಹರಿಸುವ ಬದಲು ಕೇಂದ್ರ ಸರ್ಕಾರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಕೆಲಸಗಳನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ