*ತಂತ್ರಜ್ಞಾನದ ಮೂಲಕ ಕೃಷಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ: ಪ್ರೊ. ವಿದ್ಯಾಶಂಕರ್ ಸಲಹೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೃಷಿ ಸಮಸ್ಯೆಗಳಿಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿದಲ್ಲಿ, ಗ್ರಾಮೀಣ ಜನರ ಬದುಕು ಹಸನಗೊಳಿಸಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಡಾ.ಎಸ್. ವಿದ್ಯಾಶಂಕರ್ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಗ್ರಾಮವಿಕಾಸ ಸೊಸೈಟಿ, ಮತ್ತು ಸ್ನ್ಲೈಡರ್ ಇಲೆಕ್ಟ್ರಿಕ್
ಕಂಪನಿಯ ಸಹಯೋಗದೊಂದಿಗೆ ಸ್ಥಾಪಿಸಲಾಗಿರುವ `ಇಂಡಸ್ಟ್ರಿ ಆಟೋಮೇಷನ್ ಪ್ರಯೋಗಾಲಯ’ ಉದ್ಘಾಟಿಸಿ ಮಾತನಾಡಿದ ಅವರು, ಈ ಪ್ರಯೋಗಾಲಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೈಗಾರಿಕೆ ಮತ್ತು ತಾಂತ್ರಿಕ ತರಬೇತಿಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಕೃಷಿ ವಲಯದಲ್ಲಿರುವ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳು ಪರಿಹಾರ ಕಲ್ಪಿಸಿಕೊಡಬೇಕು. ಇದರಿಂದ ಕೃಷಿ ಉತ್ಪಾದಕತೆಯನ್ನು ಹೆಚ್ಚುಗೊಳಿಸಬಹುದು. ಇದರಿಂದ ಗ್ರಾಮೀಣಾಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ವಿಟಿಯು ನಾವೀನತ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೃತಕ ಬದ್ಧಿಮತ್ತೆ, ಮಷಿನ್ ಲರ್ನಿಂಗ್, ಕ್ವಾಂಟಮ್ ಕಂಪ್ಯೂಟಿಂಗ್, ರೋಬ್ಯಾಟಿಕ್ಸ್, ಸೈಬರ್ ಸೆಕ್ಯೂರಿಟಿಯಂತಹ ಕೋರ್ಸ್ ಗಳನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಇನ್ನೂ ಫಲಿತಾಂಶ ಆಧಾರಿತ ಪಠ್ಯಕ್ರಮ ಸುಧಾರಣೆ, ನವೀನತೆ ಮತ್ತು ಉತ್ಕೃಷ್ಟ ಕೇಂದ್ರಗಳನ್ನು ನಿರ್ಮಾಣ ಮಾಡಿರುವುದಾಗಿ ತಿಳಿಸಿದರು.
ಗ್ರಾಮ ವಿಕಾಸ ಸೊಸೈಟಿಯ ಸಿಇಒ ಜಗದೀಶ ನಾಯಕ್ ಮಾತನಾಡಿ, ನಮ್ಮ ಸೊಸೈಟಿಯು ಯುವ ವಿಕಾಸ ಯೋಜನೆ ಮೂಲಕ ಯುವಕರಿಗೆ ಉದ್ಯೋಗ ಅರ್ಹತೆ ಕೌಶಲ್ಯ ಅಭಿವೃದ್ಧಿ ಕಲ್ಪಿಸಿಕೊಡಲು ಶ್ರಮಿಸಲಿದೆ. ಇದೇ ರೀತಿ ಗುರು ವಿಕಾಸ ಯೋಜನೆ ಅಡಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಹೈಸ್ಕೂಲ್ ಶಿಕ್ಷಕರಿಗೆ ಬೋಧನಾ ಸಾಮರ್ಥ್ಯವನ್ನು ಬಲಪಡಿಸುವುದನ್ನು ಉದ್ದೇಶಿಸಿದೆ ಎಂದರು.
ಇದೇ ವೇಳೆ ಇಂಡಸ್ಟಿçಯಲ್ ಆಟೋಮೇಷನ್ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಬ್ಯಾಚ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಸಚಿವ(ಆಡಳಿತ) ಡಾ.ಪ್ರಸಾದ್ ರಾಮ್‌ಪುರೇ, ಕುಲಸಚಿವ (ಮೌಲ್ಯಮಾಪನ) ಪ್ರೊ.ಯು.ಜಿ. ಉಜ್ವಲ್ ಇತರರು ಇದ್ದರು.



