*ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯಲ್ಲಿ ಕಾರ್ಯಾಗಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹೆಚ್ ಐ ವಿ ಪೀಡಿತರನ್ನು ಕಳಂಕಿತರು ಎಂಬ ಭಾವನೆಯಿಂದ ನೋಡುತ್ತಿದ್ದು, ಅವರ ಪಾಲಕರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹೆಚ್ ಐ ವಿ ಹರಡುವಿಕೆಯ ಪ್ರಮಾಣವು ಕಡಿಮೆಯಾಗಿದೆ. ಆರಂಭದಲ್ಲಿ ಅದು ತೀವ್ರವಾಗಿತ್ತು. ಈಗ ಒಂದು ಹಂತಕ್ಕೆ ಬಂದಿದೆ. ಜಾಗೃತಿ ಮೂಡಿಸುತ್ತಿರುವದರಿಂದ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಹೆಚ್ ಐ ವಿ ಪೀಡಿತರಿಗೆ ಕಾಳಜಿಪೂರ್ವಕವಾಗಿ ಆಧುನಿಕ ವೈದ್ಯಪದ್ಧತಿಯಿಂದ ಚಿಕಿತ್ಸೆ ನೀಡಿ ಖಾಯಿಲೆಯಿಂದ ಮುಕ್ತಗೊಳಿಸುವ ಕಾರ್ಯವಾಗಬೇಕು ಎಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಶ ಪವಾರ ಅವರಿಂದಿಲ್ಲಿ ಹೇಳಿದರು.
ವಿಶ್ವ ಏಡ್ಸ ದಿನಾಚರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಹೆಚ್ ಐ ವಿ ಖಾಯಿಲೆಗೆ ಸರಿಯಾದ ಚಿಕಿತ್ಸೆ ಇಲ್ಲದ ಸಂದರ್ಭದಲ್ಲಿ ರೋಗಿಯಿಂದ ನಾವು ದೂರಾಗಲು ಪ್ರಯತ್ನಿಸಿದ್ದೇವು. ಆದರೆ ಇಂದಿನ ಆಧುನಿಕ ವೈದ್ಯಕೀಯ ಪದ್ದತಿಯಲ್ಲಿ ಭಯವನ್ನು ಕಡಿಮೆ ಮಾಡಿ, ಚಿಕಿತ್ಸೆ ನೀಡಬಹುದಾಗಿದೆ. ಅಲ್ಲದೇ ಬೇರೊಬ್ಬರಿಗೆ ಹರಡುವದನ್ನು ನಿಯಂತ್ರಿಸಬಹುದ್ದು, ಸಮಸ್ಯೆಯ ಕಳಂಕವನ್ನು ತೆಗೆದುಹಾಕಲು ನಾವು ಕೆಲಸ ಮಾಡಬೇಕು. ಲೈಂಗಿಕ ಕಾರ್ಯಕರ್ತರು ಹಾಗೂ ಟ್ರಾನ್ಸ್ಜೆಂಡರ್ಗಳ ಸಮಸ್ಯೆಯಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, 1980ರಲ್ಲಿ ಹೆಚ್ ಐ ವಿ ಪೀಡಿತರು ಆಸ್ಪತ್ರೆಗೆ ಬಂದರೆ ಚಿಕಿತ್ಸೆ ನೀಡಲು ಭಯಪಡುತ್ತಿದ್ದರು.
ಅದರಲ್ಲಿಯೂ ಮುಖ್ಯವಾಗಿ ಹೆರಿಗೆಗೆ ಬಂದರಂತೂ ಅವರನ್ನು ನೋಡುವ ದೃಷ್ಠಿಯೇ ಬೇರೆಯದ್ದಾಗಿತ್ತು. ಆಫ್ರಿಕಾದ ದೇಶಗಳಲ್ಲಿ ಶೇ. 25ರಷ್ಟು ಹೆಚ್ ಐ ವಿ ಪೀಡಿತರಾಗಿದ್ದರು. ಮಿಲಟರಿ ಸೇವೆಯಲ್ಲಿದ್ದಾಗ ನಾವು ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವು. ವೈದ್ಯಕೀಯ ಆರೈಕೆಗೆ ಅಗತ್ಯವಿರುವ ಎಲ್ಲವೂ ಲಭ್ಯವಿದೆ. ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಾಗಾರದ ಸಂಘಟನಾಧ್ಯಕ್ಷ ಡಾ. ಜ್ಞಾನೇಶ ಮೋರಕರ ಅವರು ಮಾತನಾಡಿ, ಹೆಎಚ್ಐವಿ ಸೋಂಕಿಗೆ ತುತ್ತಾದವರಿಗೆ ಇಂದು ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದ್ದು, ತಿಂಗಳಿಗೊಮ್ಮೆ ಚಿಕಿತ್ಸೆ ಪಡೆದರೆ ಸಾಕು. ಮೊದಲಿನಂತೆ ಈಗಿಲ್ಲ ಎಂದರು.
ಕಾರ್ಯಾಗಾರದಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಡಾ. ಶಿವಾನಂದ ಬುಬನಾಳೆ, ಡಾ. ಆರಿಫ್ ಮಾಲ್ದಾರ, ಡಾ. ರೇಖಾ ಪಾಟೀಲ, ಡಾ. ಮಾಧವ ಪ್ರಭು, ಡಾ. ಅಮಿತ ವೈರಗಡೆ, ಡಾ. ಪ್ರಶಾಂತ ರಾಥೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



