*ಹೈಕಮಾಂಡ್ ತೀರ್ಮಾನಕ್ಕೆ ಇಬ್ಬರೂ ಬದ್ಧರಾಗಿದ್ದೇವೆ: ಸಿಎಂ-ಡಿಸಿಎಂ ಜಂಟಿ ಸುದ್ದಿಗೋಷ್ಠಿ*

ಪ್ರಗತಿವಾಹಿನಿ ಸುದ್ದಿ : ಇಂದು ಬೆಳಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಉಪಹಾರ ಕೂಟದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಹೇಳಿದ್ದಕ್ಕೆ ಇಬ್ಬರೂ ಬದ್ಧರಾಗಿದ್ದೇವೆ ಎಂದರು.
ನಾವು ಒಂದೇ ಪಕ್ಷದಲ್ಲಿದೇವೆ. ಒಂದೇ ಸಿದ್ಧಾಂತ ನಂಬಿದ್ದೇವೆ. ನಾವು ಯಾವುದೇ ಭಿನ್ನಾಭಿಪ್ರಾಯ ಇಲ್ಲದೇ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಳೆ ಬುಧವಾರ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಮತ್ತೆ ಭೇಟಿಯಾಗಲಿದ್ದೇವೆ. ಅಲ್ಲಿ ಕೆ.ಸಿ. ವೇಣುಗೋಪಾಲ್ ಕೂಡ ಬರುತ್ತಿದ್ದಾರೆ. ಈ ವೇಳೆ ಮತ್ತೆ ಚರ್ಚೆ ನಡೆಸಲಿದ್ದೇವೆ ಎಂದು ಸಿಎಂ ಸಿದ್ದರಾಂಯ್ಯ ಮಾಹಿತಿ ನೀಡಿದರು.
ಶನಿವಾರದ ಉಪಹಾರಕ್ಕೂ ಇಂದಿನ ಉಪಹಾರಕ್ಕೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಅವರು ಸಸ್ಯಾಹಾರಿ ಹಾಗಾಗಿ ನಾನು ವೆಜ್ ತಿಂಡಿ ಮಾಡಿಸಿದ್ದೆ. ನಾನು ಮಾಂಸಾಹಾರಿ ಹಾಗಾಗಿ ಅವರು ನಾಟಿಕೋಳಿ ಮಾಡಿಸಿದ್ದರು ಎಂದು ಉತ್ತರಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಮೊದಲು ನಾನೇ ಅವರನ್ನು ಕರೆದಿದ್ದೆ. ಆದರೆ ಮೊದಲು ಅವರ ಮನೆಯಲ್ಲಿ ಸಭೆ ನಡೆಯಿತು. ರಾಜಕೀಯ ಚರ್ಚೆ ನಡೆಯಿತು. ನಾಳೆ ಸುರ್ಜೇವಾಲಾ ಅವರ ಭೇಟಿಗೂ ಅವಕಾಶ ಕೇಳಿದ್ದೇವೆ. ಹಲವು ಪಕ್ಷದ ವಿಚಾರ, ಸರ್ಕಾರದ ವಿಚಾರ ಹಾಗೂ ಅಧಿವೇಶನದ ವಿಚಾರಗಳನ್ನು ಚರ್ಚಿಸಿದ್ದೇವೆ. ಶಾಸಕರಿಗೆ ಈ ಬಗ್ಗೆ ಸಂದೇಶ ನೀಡಲಿದ್ದೇವೆ ಎಂದು ಹೇಳಿದರು.
ನಮ್ಮದು ಒಂದೇ ಗುರಿ, ಒಂದೇ ಆಚಾರ ವಿಚಾರ, ಯಾರು ಏನೇ ಹೇಳಿದರೂ ಅದನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಡಿಕೆಶಿ ಹೇಳಿದರು.



