
ಪ್ರಗತಿವಾಹಿನಿ ಸುದ್ದಿ : ವಿವಾದಗಳಿಗೆ ಹೆಸರಾಗಿರುವ ಅನೇಕ ಪತಂಜಲಿ ಉತ್ಪನ್ನಗಳು ಕಳಪೆಮಟ್ಟದಿಂದ ಕೂಡಿವೆ ಎಂದು ಬಹಿರಂಗವಾಗಿದೆ. ಇದೀಗ ಗುಣಮಟ್ಟದ ಪರೀಕ್ಷೆ ವಿಚಾರದಲ್ಲಿ ಪತಂಜಲಿ ತುಪ್ಪ ಫೇಲ್ ಆಗಿದೆ.
ಉತ್ತರಾಖಂಡ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ನಿರ್ಧಾರವನ್ನ ಹೊರಡಿಸಿದೆ. ಈ ಪ್ರಕರಣವು 2020ರ ಪತಂಜಲಿಯ ಹಸುವಿನ ತುಪ್ಪದ ಮಾದರಿಗೆ ಸಂಬಂಧಿಸಿದ್ದಾಗಿದೆ. ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ದಿಲೀಪ್ ಜೈನ್ ಅವರು ಪಿಥೋರಗಢದ ಕಶ್ಚಿಯಲ್ಲಿರುವ ಕರಣ್ ಜನರಲ್ ಸ್ಟೋರ್‌ನಿಂದ ಪತಂಜಲಿ ತುಪ್ಪದ ಮಾದರಿಯನ್ನು ನಿಯಮಿತ ತಪಾಸಣೆಗಾಗಿ ಸಂಗ್ರಹಿಸಿದ್ದರು.
ಅಕ್ಟೋಬರ್ 16, 2021ರಂದು ಅಧಿಕಾರಿಗಳ ತಂಡ ಗಾಜಿಯಾಬಾದ್ ನಲ್ಲಿರುವ ರಾಷ್ಟ್ರೀಯ ಆಹಾರ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಅಲ್ಲಿ ತುಪ್ಪದ ಮಾದರಿಗಳನ್ನು ಮರುಪರೀಕ್ಷೆ ಮಾಡಲಾಯಿತು. ನವೆಂಬರ್ 26, 2021ರಂದು, ರಾಷ್ಟ್ರೀಯ ಆಹಾರ ಪ್ರಯೋಗಾಲಯವು ತನ್ನ ವರದಿಯನ್ನ ಸಲ್ಲಿಸಿತು. ಈ ವರದಿಯಲ್ಲಿ ತುಪ್ಪದ ಮಾದರಿಗಳು ಆಹಾರ ಸುರಕ್ಷತಾ ಪರೀಕ್ಷೆಯಲ್ಲಿಯೂ ವಿಫಲವಾಗಿವೆ.
ಈ ಮೂಲಕ ಪತಂಜಲಿ ತುಪ್ಪ ಕೂಡ ಗ್ರಾಹಕರ ವಿಶ್ವಾಸ ಕಳೆದುಕೊಂಡಿದೆ. ಪತಂಜಲಿ ಕಂಪನಿ ತಯಾರಿಸಿದ ತುಪ್ಪದ ಮಾದರಿಯು ಗುಣಮಟ್ಟ ನಿಯಂತ್ರಣ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಉತ್ತರಾಖಂಡದ ಸ್ಥಳೀಯ ನ್ಯಾಯಾಲಯವು ದಂಡ ವಿಧಿಸಿದೆ.
ಪತಂಜಲಿ ಉತ್ಪನ್ನಗಳ ಬಗ್ಗೆಯೇ ಇದೀಗ ಅನುಮಾನ ಎದ್ದಿದ್ದು, ಮಾರುಕಟ್ಟೆಯಲ್ಲಿ ಪತಂಜಲಿ ಕಂಪನಿ ತೀವ್ರ ಮುಜುಗರಕ್ಕೆ ಒಳಗಾಗಿದೆ.



