ಗುಂಡೇನಟ್ಟಿ ಅಂಗನವಾಡಿ ಸಹಾಯಕಿ ಕೊಲೆ ಪ್ರಕರಣ: ಆರೋಪಿ ಬಂಧನ
ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಖಾನಾಪುರ ತಾಲೂಕಿನ ಗುಂಡೇನಟ್ಟಿ ಗ್ರಾಮದ ಹೊರವಲಯದಲ್ಲಿ ಡಿ.೨೪ರಂದು ನಡೆದ ಅಂಗನವಾಡಿ ಸಹಾಯಕಿ ಜಯಶ್ರೀ ಬೆಳಗಾವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಭೇದಿಸಿದ್ದಾರೆ.
ಮೃತ ಜಯಶ್ರೀಯ ಸ್ವಂತ ಸಹೋದರ ರವಿ ಬಡಸಕರ ಕೊಲೆ ಆರೋಪಿಯಾಗಿದ್ದು, ಆತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹಲವು ವರ್ಷಗಳ ಹಿಂದೆ ಗಂಡನನ್ನು ತೊರೆದು ತವರಿನಲ್ಲಿ ಮಗನೊಂದಿಗೆ ವಾಸಿಸುತ್ತಿದ್ದ ಜಯಶ್ರೀ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದ ಸಹೋದರ ರವಿ ಈ ವಿಷಯವಾಗಿ ಜಯಶ್ರೀ ಜೊತೆ ಜಗಳವಾಡಿದ್ದ. ಇದರಿಂದ ಮನನೊಂದ ಜಯಶ್ರೀ ತವರುಮನೆ ತೊರೆದು ಸಮೀಪದ ಹೊಲದಲ್ಲಿ ಖಾಲಿ ಇದ್ದ ಮನೆಯೊಂದರಲ್ಲಿ ವಾಸಿಸುತ್ತಿದ್ದಳು. ಮಗನೊಂದಿಗೆ ಮಲಗಿದ್ದ ಸಂದರ್ಭದಲ್ಲಿ ಮನೆಯ ಹೆಂಚು ಸರಿಸಿ ಒಳಪ್ರವೇಶಿಸಿದ ರವಿ ತಂಗಿಯ ಮೇಲೆ ಹಲ್ಲೆ ನಡೆಸಿದ್ದು, ಮನೆಯ ಮೂಲೆಯಲ್ಲಿ ಇದ್ದ ನೇಗಿಲಿನಿಂದ ಜಯಶ್ರೀ ತಲೆಗೆ ಹೊಡೆದ ಕಾರಣ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ. ಇದನ್ನು ನೋಡಿದ ಜಯಶ್ರೀ ಮಗ ಅನುರಾಗ್ ಮೇಲೂ ಹಲ್ಲೆ ನಡೆಸಿದ್ದು, ಆತ ಮೂರ್ಛೆ ಹೋದ ನಂತರ ಆತನೂ ಮೃತಪಟ್ಟಿರಬಹುದೆಂದು ಭಾವಿಸಿ ಘಟನಾ ಸ್ಥಳದಿಂದ ಪರಾರಿಯಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ರವಿಯನ್ನು ಬಂಧಿಸಿದ ಪೊಲೀಸರು ಆತನ ವೈದ್ಯಕೀಯ ಪರೀಕ್ಷೆ ಮಾಡಿಸಿ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ