Belagavi NewsBelgaum NewsKannada NewsKarnataka NewsPolitics

*ದ್ವೇಷದ ಭಾಷಣ ಮಾಡಿದರೆ 7 ವರ್ಷದವರೆಗೆ ಶಿಕ್ಷೆ: ಕಾಯ್ದೆ ಜಾರಿಗೆ ಮುಂದಾದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಸಾರ್ವಜನಿಕ ಸ್ಥಳ, ಬಹಿರಂಗ ಸಾಮಾವೇಶಗಲ್ಲಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ರಾಜ್ಯ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.‌

ದ್ವೇಷ ಭಾಷಣ, ಪ್ರಚೋದನಕಾರಿ ಮಾತುಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವುದನ್ನು ಗಮನಿಸಿರುವ ಸರ್ಕಾರ, ಇಂತಹ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದೆ. ದ್ವೇಷಾಪರಾಧ ಎಸಗಿದವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಲಾಗುತ್ತದೆ.

ಈ ಉದ್ದೇಶಕ್ಕಾಗಿ ಸರ್ಕಾರ ರೂಪಿಸಿರುವ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ- 2025 ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ.  

ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರಸರಣ ಪ್ರಕಟಣೆ ಅಥವಾ ಪ್ರಚಾರ ಮಾಡುವುದರಿಂದ ಸಮಾಜದ ಸಾಮರಸ್ಯ ಹದಗೆಡಿಸುವುದು ಮತ್ತು ದ್ವೇಷ ಹರಡಿಸುವಿಕೆಗೆ ಕಡಿವಾಣ ಹಾಕಲು ಮತ್ತು ಅಂತಹ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರನ್ನು ಶಿಕ್ಷೆಗೆ ಒಳಪಡಿಸುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ (ಪ್ರತಿಬಂಧಕ) ಮಸೂದೆ ರೂಪಿಸಲಾಗಿದೆ.

Home add -Advt

ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವೈಕಲ್ಯ ಅಥವಾ ಬುಡಕಟ್ಟು ಜನರ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದು ಅಥವಾ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದನ್ನು ದ್ವೇಷಾಪರಾಧ ಎಂದು ಪರಿಗಣಿಸಲಾಗುತ್ತದೆ. ಮೊದಲ ಬಾರಿ ಇಂತಹ ಕೃತ್ಯದಲ್ಲಿ ಭಾಗಿಯಾದರೆ ಏಳುವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದು. ಇದೇ ಅಪರಾಧವನ್ನು ಪುನರಾವರ್ತಿಸಿದರೆ ಎರಡು ವರ್ಷದಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಮತ್ತು ₹ 1 ಲಕ್ಷ ದಂಡ ವಿಧಿಸಲು ಮಸೂದೆ ಅವಕಾಶ ಕಲ್ಪಿಸಿದೆ.

ದ್ವೇಷಾಪರಾಧದಿಂದ ಆಗಿರುವ ಹಾನಿಯ ತೀವ್ರತೆ ಪರಿಗಣಿಸಿ ಸಂತ್ರಸ್ತರಿಗೆ ನ್ಯಾಯಾಲಯವು ಸೂಕ್ತ ಪರಿಹಾರ ಘೋಷಿಸಬಹುದು. ಇಂತಹ ಕೃತ್ಯವೂ ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲ್ಪಡಲಿದೆ. ಇವುಗಳನ್ನು ಜೆಎಂಎಫ್‌ಸಿ ನ್ಯಾಯಾಲಯ ವಿಚಾರಣೆ ನಡೆಸಲಿದೆ.

Related Articles

Back to top button