*ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಸಿಬ್ಬಂದಿಯನ್ನು ಅಭಿನಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಗ್ರಾಮೀಣ ಕ್ಷೇತ್ರಕ್ಕೆ ಈ ವರ್ಷ ನೂರಾರು ಕೋಟಿ ರೂಪಾಯಿಗಳಷ್ಟು ಅನುದಾನ ತಂದಿದ್ದೇನೆ ಎಂದ ಸಚಿವೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯತ್ ಸಿಬ್ಬಂದಿಗೆ ಇತ್ತೀಚಿಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಳಗಾವಿ ತಾಲೂಕು ಸಿಬ್ಬಂದಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಶುಕ್ರವಾರ ಅಭಿನಂದಿಸಿದರು.
ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದ ಸಚಿವರು, ದೈನಂದಿನ ಒತ್ತಡದ ನಡುವೆಯೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದೀರಿ. ಜೀವನಕ್ಕೆ ಕ್ರೀಡೆ ಬಹಳ ಅವಶ್ಯಕ. ನಮ್ಮನ್ನು ನಾವು ಪ್ರೀತಿಸಿದರೆ ಬೇರೆಯವರು ನಮ್ಮನ್ನು ಪ್ರೀತಿಸುತ್ತಾರೆ. ಹಾಗಾಗಿ ನಿತ್ಯ ಯೋಗ, ವ್ಯಾಯಾಮ ಮಾಡುವುದು ಅಗತ್ಯ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಬೆಳಗಾವಿ ತಾಲೂಕು ಚಾಂಪಿಯನ್ ಆಗಿರುವುದು ಖುಷಿಯ ವಿಚಾರ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು. ನಾನು ಕೇವಲ ಗ್ರಾಮ ಪಂಚಾಯಿತಿಗಳ ಮೇಲೆ ಜವಾಬ್ದಾರಿ ಬಿಟ್ಟು ಕೂರುವವಳಲ್ಲ. ಸಮಗ್ರ ಅಭಿವೃದ್ಧಿಯೇ ನನ್ನ ಕನಸು. ಗ್ರಾಮೀಣ ಕ್ಷೇತ್ರಕ್ಕೆ ಈ ವರ್ಷ ನೂರಾರು ಕೋಟಿ ರೂಪಾಯಿಗಳಷ್ಟು ಅನುದಾನ ತಂದಿದ್ದೇನೆ. ಇದರಲ್ಲಿ ಒಂದಿಷ್ಟು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ, ಈಗಾಗಲೇ 40 ಕೋಟಿ ರೂಪಾಯಿ ಮೊತ್ತದ ಕೆಲಸ ನಡೆಯುತ್ತಿದೆ. ಎಲ್ಲರೂ ಸೇರಿಕೊಂಡು ಕನಸಿನ ಬೆಳಗಾವಿ ಗ್ರಾಮೀಣ ಕ್ಷೇತ್ರ ರೂಪಿಸೋಣ. ಜಾತ್ಯತೀತ ನಿಲುವಿನಿಂದ ಕೆಲಸ ಮಾಡೋಣ ಎಂದು ಸಚಿವರು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಮೂಲ ಸೌಕರ್ಯ ಕಲ್ಪಿಸಿ. ರಸ್ತೆ ಅಭಿವೃದ್ಧಿಗೆ ನಾನು ಹಣ ತರುತ್ತೇನೆ. ಚರಂಡಿ, ಲೈಟ್, ನೀರಿನ ಸಮಸ್ಯೆಗೆ ನೀವು ಸ್ಪಂದಿಸಿ. ಗ್ರಾಮಗಳ ನೈರ್ಮಲ್ಯ ಕಾಪಾಡಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು, ಬಳಿಕ ಮಾತನಾಡಿ 2018 ರಿಂದ 2023ರವರೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾವಿರ ಕೋಟಿ ರೂಪಾಯಿಯಷ್ಟು ಅನುದಾನ ತಂದಿದ್ದು, ಇನ್ನೂ ಹೆಚ್ಚಿನ ಅನುದಾನವನ್ನು ಕ್ಷೇತ್ರಕ್ಕೆ ತರಲಿದ್ದಾರೆ. ಕ್ಷೇತ್ರಕ್ಕೆ ಅವರು ದೊಡ್ಡ ಆಸ್ತಿ ಎಂದರು.
ಈ ವೇಳೆ ಕಾಡಾ ಅಧ್ಯಕ್ಷರಾದ ಯುವರಾಜ ಕದಂ, ತಾಲೂಕ್ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಯಶವಂತ ಮುಂತಾದವರು ಉಪಸ್ಥಿತರಿದ್ದರು.



