Kannada NewsKarnataka NewsLatestPolitics

*ನನ್ನ ಶ್ರಮ, ನನ್ನ ಸಂಪಾದನೆ; ನನಗೆ ಇಷ್ಟವಾದ ಶೂ-ವಾಚ್ ಧರಿಸುತ್ತೇನೆ: ವಿಪಕ್ಷ ನಾಯಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: “ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕರು ತಮ್ಮ ವಾಚ್ ವಿಚಾರವಾಗಿ ಹೆಚ್ಚು ಟೀಕೆ ಮಾಡುತ್ತಿರುವುದಕ್ಕೆ ಖಾರವಾಗಿ ಉತ್ತರಿಸಿದ್ದಾರೆ.

ನಾನು ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದರೂ ಖರೀದಿ ಮಾಡುತ್ತೇನೆ. ಖರೀದಿ ಮಾಡುವ ಶಕ್ತಿ ನನಗಿದೆ. ಯಾರು ಯಾವ ಪ್ಯಾಂಟ್ ಹಾಕುತ್ತಾರೆ, ಯಾವ ವಾಚ್ ಹಾಕುತ್ತಾರೆ, ಯಾವ ಕನ್ನಡಕ ಹಾಕುತ್ತಾರೆ ಎಂದು ನಾನು ಪ್ರಶ್ನೆ ಮಾಡುವುದಿಲ್ಲ. ಇದು ವೈಯಕ್ತಿಕ ವಿಚಾರ, ಅವರವರ ಆಸೆಗಳು. ಕೆಲವರು ಒಂದು ಸಾವಿರದ ಶೂ ಧರಿಸಿದರೆ ಮತ್ತೆ ಕೆಲವರು 1 ಲಕ್ಷದ ಶೂ ಧರಿಸುತ್ತಾರೆ. ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ಟುವೆ, 10 ಲಕ್ಷ ರೂಪಾಯಿ ವಾಚನ್ನೂ ಕಟ್ಟುವೆ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ. ಪಾಪ, ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಇದೆ. ಅವರಿಗೆ ಚುನಾವಣೆ ನಿಂತ ಅನುಭವವೂ ಇಲ್ಲ. ಹೀಗಾಗಿ ಗೊತ್ತಿಲ್ಲದೆ ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರಾಗಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ನನ್ನ ವ್ಯವಹಾರ, ನನ್ನ ಬದುಕು ಏನು ಎಂದು ಬಿಜೆಪಿಯ ಶೇಕಡಾ 90 ರಷ್ಟು ನಾಯಕರಿಗೆ ಗೊತ್ತಿದೆ ಎಂದು ತಿಳಿಸಿದರು.

ಜನಪರ ಕೆಲಸ ಮಾಡಿ ಗುರಿ ಮುಟ್ಟುತ್ತೇವೆ

Home add -Advt

ಭಾಷಣದ ವೇಳೆ ಮುಂದಿನ ದಿನಗಳಲ್ಲಿ ಹೊಸ ಪರ್ವ ಆರಂಭವಾಗಲಿದೆ, ಹೊಸ ಗುರಿ ಮುಟ್ಟೋಣ ಎಂದು ಹೇಳಿದಿರಿ, ಯಾವಾಗ ಗುರಿ ಮುಟ್ಟುತ್ತೀರಿ ಎಂದು ಕೇಳಿದಾಗ, “ನಾವು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರವಲ್ಲವೇ ಗುರಿ ಮುಟ್ಟುವುದು. ನಮ್ಮ ಸಾಧನೆಗಳು ಜನರನ್ನು ತಲುಪುತ್ತಿದೆ. ಗ್ಯಾರಂಟಿ ಯೋಜನೆಯಿಂದ ಜನರಿಗೆ 1.11 ಲಕ್ಷ ಕೋಟಿಯಷ್ಟು ಹಣ ಜನರಿಗೆ ತಲುಪುತ್ತಿದ್ದಂತೆ ಗ್ಯಾರಂಟಿ ಸಮಾವೇಶ ಮಾಡಬೇಕು ಎಂದು ನಾನು ಹಾಗೂ ಕೃಷ್ಣ ಭೈರೇಗೌಡ ಅವರು ಚರ್ಚೆ ಮಾಡುತ್ತಿದ್ದೆವು. ಹೀಗೆ ನಮ್ಮ ಹೊಸ ಆಲೋಚನೆಗಳಿವೆ. ಅವುಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ” ಎಂದರು.

Related Articles

Back to top button