
ಪ್ರಗತಿವಾಹಿನಿ ಸುದ್ದಿ: ಎರಡು ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಗಂಡ-ಹೆಂಡತಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಮೃತರನ್ನು ಸುಲೋಚನಾ (70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್ (35) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮೃತರು ಅಫಜಲಪುರ ತಾಲ್ಲೂಕಿನ ತೆಲ್ಲೂಣಗಿ ಗ್ರಾಮದ ನಿವಾಸಿಗಳು. ದಂಪತಿ ತಮ್ಮ ಗ್ರಾಮದಿಂದ ಕಲಬುರಗಿಗೆ ಜೀಪ್‌ನಲ್ಲಿ ತೆರಳುತ್ತಿದ್ದರು. ಅತಿವೇಗದ ಚಾಲನೆಯಿಂದ ಎದುರಿಗೆ ಬರುತ್ತಿದ್ದ ಬಸ್‌ಗೆ ಜೀಪ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಂಪತಿ ಕೊನೆಯುಸಿರೆಳೆದಿದ್ದಾರೆ.
ಡಿಕ್ಕಿಯ ರಭಸಕ್ಕೆ ಜೀಪ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




